ಶೋಕಿ-ಮೋಜು-ಮಸ್ತಿಗಾಗಿ ಕಳ್ಳತನ: ಆರೋಪಿ ಸೆರೆ, 9 ಲಕ್ಷ ಮೌಲ್ಯದ ಮಾಲು ವಶ

Social Share

ಬೆಂಗಳೂರು,ಆ.23- ಐಷಾರಾಮಿ ಜೀವನ, ಮೋಜು- ಮಸ್ತಿಗಾಗಿ ಸುಲಭವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆಆರ್‍ಪುರ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 11 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು ಕಗ್ಗಲಿ ಹೊಸಹಳ್ಳಿ ಗ್ರಾಮದ ಮುನಿರಾಜು ಅಲಿಯಾಸ್ ಪನ್ನಾರಿ ಅಲಿಯಾಸ್ ರಾಜು(45) ಬಂಧಿತ ಆರೋಪಿ. ಆರೋಪಿಯು ಬೈಕ್‍ಗಳ ಹ್ಯಾಂಡ್‍ಲಾಕ್‍ಗಳನ್ನು ಮುರಿದು, ಇಗ್ನೀಷಿಯನ್ ವೈರ್‍ನ್ನು ಕತ್ತರಿಸಿ, ವೈಯರ್‍ಗಳನ್ನು ಜೋಡಿಸಿ ವಾಹನಗಳನ್ನು ಡೈರೆಕ್ಟ್ ಮಾಡಿಕೊಂಡು ಕಳ್ಳತ ಮಾಡುತ್ತಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ.

ಆರೋಪಿಯು ನಗರದ ಕೆಆರ್‍ಪುರ, ಹೆಣ್ಣೂರು, ಬಾಣಸವಾಡಿ, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ಕೋಲಾರ ಜಿಲ್ಲೆಯ ಗಲ್‍ಪೇಟೆ, ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ರಸ್ತೆಗಳ ಪಕ್ಕದಲ್ಲಿ , ಮನೆ, ಅಂಗಡಿಗಳ ಮುಂಭಾಗ, ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಬೈಕ್‍ಗಳನ್ನು ಒಂದು ಟಾಟಾ ಸುಮೋ ಕಾರನ್ನು ಕಳ್ಳತನ ಮಾಡುತ್ತಿದ್ದನು.

ಕಳವು ಮಾಡಿದ ವಾಹನಗಳನ್ನು ಮಾರಾಟ ಮಾಡುವ ಸಲುವಾಗಿ ತಂದು ತನ್ನ ತೋಟದ ಮಿಷನ್ ಮನೆ ಮತ್ತು ಖಾಲಿ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಿದ್ದ 10 ದ್ವಿಚಕ್ರ ವಾಹನಗಳು ಮತ್ತು ಒಂದು ಟಾಟಾ ಸುಮೋ ಕಾರನ್ನು ವಶಪಡಿಸಿಕೊಳ್ಳವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಸಿಪಿ ಗಿರೀಶ್ ಮತ್ತು ಎಸಿಪಿ ಶಾಂತಮಲ್ಲಪ್ಪ ಅವರ ಮಾರ್ಗ ದರ್ಶನದಲ್ಲಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಇನ್‍ಸ್ಪೆಕ್ಟರ್ ನಂದೀಶ ಅವರನ್ನೊಳಗೊಂಡ ಸಿಬ್ಬಂದಿ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ ಮತ್ತು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

Articles You Might Like

Share This Article