ಸಂಪುಟ ವಿಸ್ತರಣೆ ವರಿಷ್ಠರ ವಿವೇಚನೆಗೆ ಬಿಟ್ಟದ್ದು : ಎಂ.ಬಿ.ಪಾಟೀಲ್

ಬೆಂಗಳೂರು, ಮೇ 27-ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ರಾಜ್ಯದ ಮೈತ್ರಿ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್, ಸಂಪುಟ ವಿಸ್ತರಣೆ ವಿಚಾರ ವರಿಷ್ಠರ ವಿವೇಚನೆಗೆ ಬಿಟ್ಟದ್ದು ಎಂದರು.

ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲ, ರಾಜಸ್ಥಾನ, ಮಹಾರಾಷ್ಟ್ರ, ಛತ್ತೀಸ್‍ಗಢ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಲೋಕಸಭೆ ಚುನಾವಣೆ ರಾಷ್ಟ್ರ ಮಟ್ಟಕ್ಕೆ ಸಂಬಂಧಪಟ್ಟಿದ್ದಾಗಿದೆ. ರಾಜ್ಯದ ಮೈತ್ರಿ ಸರ್ಕಾರಕ್ಕೂ, ಚುನಾವಣೆಗೂ ಸಂಬಂಧವಿಲ್ಲ. ದೇಶಾದ್ಯಂತ ಬಿಜೆಪಿ ಪರವಾದ ತೀರ್ಪು ಬಂದಿದೆ. ಜನಾದೇಶವನ್ನು ತಲೆಬಾಗಿ ಸ್ವಾಗತಿಸುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಸೋಲು ಹೊಸತೇನಲ್ಲ ಎಂದರು.

ಸೋಲನ್ನೇ ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟನೆ ಮಾಡಬೇಖಿದೆ. ಯಾವುದೇ ಒಂದು ಸಮಾಜದಿಂದ ಚುನಾವಣೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಲಿಂಗಾಯತ ಒಕ್ಕಲಿಗ, ದಲಿತ ಸೇರಿದಂತೆ ಎಲ್ಲಾ ಸಮುದಾಯದ ಸಹಕಾರ ಬೇಕು. ಬಿ.ಸಿ. ಪಾಟೀಲ್ ಅವರ ಹೇಳಿಕೆ ವೈಯಕ್ತಿಕವಾಗಿದೆ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರದ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ತಮ್ಮ ನಡುವೆ ಆತ್ಮೀಯ ಸಂಬಂಧವಿದ್ದು, ಅದಕ್ಕೆ ರಾಜಕೀಯ ಲೇಪ ಹಚ್ಚುವುದು ಬೇಡ ಎಂದರು.

ಬಿಜೆಪಿಯ ಶಾಸಕರೊಬ್ಬರು ನಿನ್ನೆ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು. ಹಾಗೆಂದು ಅವರು ಕಾಂಗ್ರೆಸ್‍ಗೆ ಸೇರಲು ಬಂದಿದ್ದರು ಎಂದು ಬಿಂಬಿಸುವುದು ಸರಿಯೇ ಎಂದು ಮರುಪ್ರಶ್ನೆ ಹಾಕಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ:  ಕೆಪಿಸಿಸಿ ಅಧ್ಯಕ್ಷ ಸ್ಥಾನದ ಹುದ್ದೆ ಖಾಲಿ ಇಲ್ಲ. ತಾವು ಗೃಹ ಸಚಿವರಾಗಿ ಮುಂದುವರೆಯಲಿದ್ದು, ದಿನೇಶ್‍ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿಯೇ ಮುಂದುವರೆಯುತ್ತಾರೆ.

ಕಾಂಗ್ರೆಸ್ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿಯವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಚುನಾವಣಾ ಫಲಿತಾಂಶದ ನಂತರ ಪಕ್ಷದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ನನಗೆ ನಾನೇ ನಾಯಕ ಎಂದು ತೀರ್ಮಾನಿಸಿಕೊಳ್ಳಲು ಸಾಧ್ಯವಿಲ್ಲ. ನಾಯಕ ಯಾರೆಂಬುದನ್ನು ಜನರು ತೀರ್ಮಾನಿಸಬೇಕಾಗುತ್ತದೆ ಎಂದರು.