ಪೇಜಾವರ ಶ್ರೀಗಳೇನು ಪ್ರಧಾನಿಯೇ..? ಎಂ.ಬಿ.ಪಾಟೀಲ್ ಆಕ್ರೋಶ

ವಿಜಯಪುರ, ಆ.2- ಲಿಂಗಾಯತ ಧರ್ಮದ ಪ್ರತ್ಯೇಕ ಸ್ಥಾನಮಾನದ ಚರ್ಚೆಗೆ ಪಂಥಾಹ್ವಾನ ಕೊಡಲು ಪೇಜಾವರ ಶ್ರೀಗಳೇನು ಪ್ರಧಾನಿಯೇ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರರು ಮೊದಲು ತಮ್ಮ ಮಠದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ. ಬೇರೆ ಧರ್ಮಗಳಲ್ಲಿ ಕಡ್ಡಿ ಆಡಿಸುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲಿತರೊಂದಿಗೆ ಭೋಜನ ಮಾಡಿದಾಕ್ಷಣ ಸಮಾನತೆ ಸೃಷ್ಟಿಯಾಗುವುದಿಲ್ಲ. ನಿಮ್ಮ ಮಠಕ್ಕೆ ದಲಿತರನ್ನು ಮಠಾಧಿಪತಿಯನ್ನಾಗಿ ನೇಮಿಸಿ ಅಥವಾ ಲಿಂಗಾಯತರನ್ನಾದರೂ ಮಠಾಧೀಶರನ್ನಾಗಿ ಮಾಡಿ ಎಂದು ಸವಾಲು ಹಾಕಿದ್ದಾರೆ.

ಪೇಜಾವರ ಶ್ರೀಗಳು ಕರೆದ ಕಡೆ ಹೋಗಲು ನಾವು ಖಾಲಿ ಕುಳಿತಿಲ್ಲ. ಅವರೇನು ಪ್ರಧಾನಿಯೂ ಅಲ್ಲ, ಹೈಕಮಾಂಡ್ ಕೂಡ ಅಲ್ಲ. ಚರ್ಚೆಗೆ ಪಂಥಾಹ್ವಾನ ನೀಡಲು ಅವರು ಯಾರು ಎಂದು ಪ್ರಶ್ನಿಸಿದ್ದಾರೆ.