ಲಖನೌ, ಜ. 19- ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಒಂದು ಸುಳ್ಳಿನ ಮಿಷಿನ್ ಇದ್ದಂತೆ, ಯಾವ ಸಮಯದಲ್ಲಾದರೂ ಸುಳ್ಳಿನ ಕಂತೆಯನ್ನೇ ಬಿಚ್ಚಿಡುವ ಚಾಣಕ್ಷತನ ಅವರಲ್ಲಿದೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕುಟುಕಿದ್ದಾರೆ.
ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮನೆಗಳಿಗೆ 300 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಭರವಸೆ ನೀಡಿರುವ ಬೆನ್ನಲ್ಲೇ ಕೇಶವ್ ಪ್ರಸಾದ್ ಅವರು ಈ ಹೇಳಿಕೆಯನ್ನು ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.
ಟ್ವೀಟ್‍ನಲ್ಲಿ ಎಸ್‍ಪಿ ಮುಖಂಡ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದಿರುವ ಕೇಶವ್ ಪ್ರಸಾದ್, ಈ ಹಿಂದೆ ಎಸ್‍ಪಿ ಪಕ್ಷವು ಉತ್ತರಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದಾಗ ವಿದ್ಯುತ್, ಕಂಬಗಳು, ಟ್ರಾನ್ಸ್‍ಫಾರಂಗಳು ರಾತ್ರೋ ರಾತ್ರಿ ಕಾಣೆಯಾಗಿದ್ದವು. ಅದನ್ನು ಮತದಾರರು ಇನ್ನು ಮರೆತಿಲ್ಲ. ಹೀಗಿರುವಾಗ ಅಖಿಲೇಶ್ ಯಾದವ್ ಅವರು ಸುಳ್ಳಿನ ಮಿಷಿನ್‍ನಂತೆ ಆಶ್ವಾಸನೆಗಳನ್ನು ನೀಡುತ್ತಾ ಹೋಗುತ್ತಿದ್ದಾರೆ.
ಈಗ ಮತ್ತೆ ಉತ್ತರಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಸಲುವಾಗಿ ಪಕ್ಷ ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್ ನೀಡು ವುದಾಗಿ ಹೊಸ ಸುಳ್ಳನ್ನು ಹೇಳುತ್ತಾ ಮತದಾರರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ, ಆದರೆ ಮತದಾರರು ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಶವ್ ಪ್ರಸಾದ್ ಹೇಳಿದರು.
ಇಂದಿನಿಂದ ಅಖಿಲೇಶ್ ಯಾದವ್ ಅವರು ಚುನಾವಣಾ ಪ್ರಚಾರ ಆರಂಭಿಸಿದ್ದು ಈ ವೇಳೆ ಯಾರ ಯಾರ ಹೆಸರಿನಲ್ಲಿ ವಿದ್ಯುತ್ ಮೀಟರ್‍ಗಳು ಇವೆಯೋ, ಅಥವಾ ಮುಂದಿನ ದಿನಗಳಲ್ಲಿ ವಿದ್ಯುತ್ ಮೀಟರ್‍ಗಳು ಪಡೆಯಲು ಹೊರಟಿದ್ದಾರೋ ಅವರು 300 ಯುನಿಟ್ ಉಚಿತ ವಿದ್ಯುತ್ ಪಡೆಯಲು ಎಸ್‍ಪಿ ನಡೆಸುವ ಆಂದೋಲನದಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಎಸ್‍ಪಿ ಮುಖಂಡ ಯಾದವ್ ತಿಳಿಸಿದ್ದಾರೆ.
403 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶಕ್ಕೆ ಫೆಬ್ರವರಿ 10 ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
