ಖರ್ಗೋನ್,ಆ.8- ಪಿಕ್‍ನಿಕ್ ಮೂಡ್‍ನಲ್ಲಿದ್ದ 50 ಪ್ರವಾಸಿಗರು ದಿಢೀರ್ ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಎತ್ತರ ಪ್ರದೇಶಗಳಿಗೆ ಓಡಿ ಹೋಗಿದ್ದು, 14 ಕಾರುಗಳು ರಭಸವಾಗಿ ಹರಿದ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಂದೋರ್ ಜಿಲ್ಲೆಯಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಪ್ರವಾಸಿಗರು ಖರ್ಗೋನ್ ಅರಣ್ಯ ಪ್ರದೇಶದ ಬಲ್ವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ತಾಣಕ್ಕೆ ಭೇಟಿ ನೀಡಿದ್ದರು.
ಭಾರೀ ಮಳೆಯಿಂದಾಗಿ ಕಟ್ಕೋಟ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಕೆಳ ಭಾಗದ ನೀರಿನ ಹರಿವಿನ ಪ್ರದೇಶದಲ್ಲಿ ಪ್ರವಾಸದ ಮಜಾವನ್ನು ಸವಿಯುತ್ತಿದ್ದವರಿಗೆ ದಿಢೀರ್ ನೀರಿನ ಹರಿವು ಕಂಡು ಗಾಬರಿಯಾಗಿದ್ದಾರೆ. ಸುಮಾರು 50 ಪ್ರವಾಸಿಗರು ತಮ್ಮ ಜೀವ ಉಳಿಸಿಕೊಳ್ಳಲು ವಾಹನಗಳನ್ನು ಬಿಟ್ಟು ಸುರಕ್ಷಿತವಾದ ಎತ್ತರದ ಪ್ರದೇಶಕ್ಕೆ ಓಡಿಹೋಗಿದ್ದಾರೆ. ಆ ವೇಳೆ ನೀರಿನ ಹರಿವಿನಲ್ಲಿ 14 ಕಾರುಗಳು ಕೊಚ್ಚಿಹೋಗಿವೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಟ್ರಾಕ್ಟರ್ ಸಹಾಯದಿಂದ 10 ಕಾರುಗಳು ಮತ್ತು ಇತರ ವಾಹನಗಳನ್ನು ಹೊರಗೆಳೆದಿದ್ದಾರೆ. ಕೊಚ್ಚಿಹೋಗಿರುವ ಕಾರುಗಳು ಅಣ್ಣೆಕಟ್ಟಿನ ಬಳಿ ಸಿಲುಕಿಕೊಂಡಿವೆ. ಕಾರುಗಳು ನೀರಿನಲ್ಲಿ ಮುಳುಗಿರುವುದರಿಂದ ಸ್ಟಾರ್ಟ್ ಆಗದೆ ಕೆಟ್ಟುಹೋಗಿದ್ದು, ಅವುಗಳನ್ನು ಹೊರತೆಗೆಯುವ ಪ್ರಯತ್ನ ನಡೆದಿದೆ.
ಪ್ರವಾಸಿಗರನ್ನು ಬದಲಿ ವಾಹನಗಳ ಮೂಲಕ ಅವರ ಊರುಗಳಿಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧಿಕಾರಿ ಜಿತೇಂದ್ರ ಸಿಂಗ್ ಪವಾರ್ ತಿಳಿಸಿದ್ದಾರೆ.