ಬೆಂಗಳೂರು, ಜ.18- ಒಡವೆ ಮಾಡುವ ಆಚಾರಿಯನ್ನು ಸಂಪರ್ಕಿಸಿ ತಾನು ಜ್ಯುವೆಲರಿ ಅಂಗಡಿ ತೆರೆಯುತ್ತಿರುವುದಾಗಿ ಹೇಳಿ ನೆಕ್ಲೆಸ್‍ಗಳನ್ನು ಮಾಡಿಸಿಕೊಂಡು ನಂತರ ಹಣ ಕೊಡದೆ ಆಭರಣದೊಂದಿಗೆ ಪರಾರಿಯಾಗಿದ್ದ ಆಂಧ್ರ ಪ್ರದೇಶ ಮೂಲದ ವಂಚಕನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಮಾಗಡಿ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಫರಾನ್ ಬಂಧಿತ ಆರೋಪಿ. ಈತನಿಂದ 5 ಲಕ್ಷ ರೂ. ಮೌಲ್ಯದ 116ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್‍ರೋಡ್‍ನಲ್ಲಿ ಜ್ಯುವೆಲರಿ ಶಾಪ್ ತೆರೆಯುವುದಾಗಿ ಹೇಳಿ ಆರೋಪಿ ಫರಾನ್ ಅಂಗಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾನೆ.
ನಂತರ ಆಭರಣಗಳನ್ನು ತಯಾರು ಮಾಡುವ ಆಚಾರಿಗಳನ್ನು ಸಂಪರ್ಕಿಸುತ್ತಾನೆ. ಈತನ ಮಾತನ್ನು ನಂಬಿದ ಆಚಾರಿಯೊಬ್ಬರು ತಾವು ಆಭರಣಗಳನ್ನು ತಯಾರು ಮಾಡಿಕೊಡುವುದಾಗಿ ಹೇಳಿದಾಗ, ಡಿ.31ರಂದು ಐದು ನೆಕ್ಲೆಸ್‍ಗಳನ್ನು ಮಾಡಿಕೊಡುವಂತೆ ತಿಳಿಸುತ್ತಾನೆ.
ಅದರಂತೆ ಆಚಾರಿ ಐದು ನೆಕ್ಲೆಸ್‍ಗಳನ್ನು ಮಾಡಿಕೊಂಡು ಜ.6ರಂದು ಆರೋಪಿ ಹೇಳಿದ ಅಂಗಡಿ ಬಳಿ ಬರುತ್ತಾರೆ. ಅಂಗಡಿಯಲ್ಲಿ ಆಚಾರಿಯನ್ನು ಕೂರಿಸಿ ಈ ನೆಕ್ಲೆಸ್‍ಗಳನ್ನು ಪರೀಕ್ಷಿಸಿಕೊಂಡು ಬರುವುದಾಗಿ ಹೇಳಿ ಆಭರಣದೊಂದಿಗೆ ಆರೋಪಿ ಅಲ್ಲಿಂದ ತೆರಳುತ್ತಾನೆ. ಎಷ್ಟು ಹೊತ್ತಾದರೂ ಆತ ಬಾರದಿದ್ದಾಗ ಆಚಾರಿ ಮೊಬೈಲ್ ಫೋನ್‍ಗೆ ಹಲವಾರು ಕರೆ ಮಾಡಿದಾಗಲೂ ಸ್ವಿಚ್ ಆಫ್ ಬಂದಿದೆ.ನಂತರ ತಾನು ಮೋಸ ಹೋದೆನೆಂದು ತಿಳಿದು ತಕ್ಷಣ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.
ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ನಂಜುಂಡೇಗೌಡ ಅವರ ಅಪರಾಧ ಪತ್ತೆ ತಂಡದ ಮಾಗಡಿ ರಸ್ತೆ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಅವರನ್ನೊಳಗೊಂಡ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವಂಚಕನನ್ನು ಬಂಧಿಸಿದ್ದಾರೆ.
ತೀವ್ರ ವಿಚಾರಣೆ ನಡೆಸಿ ಆರೋಪಿಯಿಂದ 5 ಲಕ್ಷ ರೂ. ಮೌಲ್ಯದ 116 ಗ್ರಾಂ ಆಭರಣ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅವರುಗಳ ಬಂಧನಕ್ಕೆ ಪೊಲೀಸರು ಶೋಧ ಮುಂದುವರೆಸಿದ್ದಾರೆ.
