‘ಮಹಾ’ಖಾತೆ ಹಂಚಿಕೆ ಎನ್‍ಸಿಪಿಗೆ ಅಗ್ರಮಾನ್ಯತೆ, ಡಿಸಿಎಂ ಅಜಿತ್‍ಗೆ ಹಣಕಾಸು, ಅನಿಲ್‍ಗೆ ಗೃಹ

ಮುಂಬೈ, ಜ.5- ಮಿತ್ರಪಕ್ಷಗಳ ನಡುವೆ ಪ್ರಮುಖ ಖಾತೆಗಳಿಗೆ ಕ್ಯಾತೆ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೊನೆಗೂ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ಶರದ್‍ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‍ಸಿಪಿ)ಗೆ ಪ್ರಮುಖ ಖಾತೆಗಳು ಲಭಿಸಿವೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್‍ಗೆ ಹಣಕಾಸು ಖಾತೆ ನೀಡಲಾಗಿದೆ. ಎನ್‍ಸಿಪಿ ಪಕ್ಷದ ಮತ್ತೊಬ್ಬ ಹಿರಿಯ ನಾಯಕ ಅನಿಲ್ ದೇಶ್‍ಮುಖ್‍ಗೆ ಗೃಹ ಖಾತೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಮುಖ್ಯಮಂತ್ರಿ ಠಾಕ್ರೆ ಅವರ ಪುತ್ರ ಮತ್ತು ಪ್ರಥಮ ಬಾರಿ ಶಾಸಕರಾಗಿರುವ ಆದಿತ್ಯ ಠಾಕ್ರೆಗೆ ಪರಿಸರ, ಪ್ರವಾಸೋದ್ಯಮ ಖಾತೆ ನೀಡಲಾಗಿದೆ.

ಕಾಂಗ್ರೆಸ್ ಧುರೀಣ ಭಾಳಸಾಬ್ ತೋರಟ್ ಅವರಿಗೆ ಕಂದಾಯ ಖಾತೆ ನೀಡಿ ಪಕ್ಷವನ್ನು ಸಮಾಧಾನಗೊಳಿಸಲಾಗಿದೆ. ಪ್ರಮುಖ ಖಾತೆಗಳಿಗಾಗಿ ಮಹಾರಾಷ್ಟ್ರ ವಿಕಾಸ ಆಘಡಿ (ಎಂವಿಎ) ಮಿತ್ರಪಕ್ಷಗಳಾದ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟವಾಗಿತ್ತು.

ಖಾತೆಗಳನ್ನು ಹಂಚಿಕೆ ಮಾಡಲು ಮುಖ್ಯಮಂತ್ರಿ ಠಾಕ್ರೆ ಸಾಕಷ್ಟು ಕಸರತ್ತು ನಡೆಸಿದ ನಂತರ ನಿನ್ನೆ ರಾತ್ರಿ ಖಾತೆಗಳ ಹಂಚಿಕೆ ಪಟ್ಟಿಯನ್ನು ಅನುಮೋದನೆಗಾಗಿ ರಾಜ್ಯಪಾಲ ಭಗತ್‍ಸಿಂಗ್ ಕೋಶಿಯಾರಿ ಅವರಿಗೆ ರವಾನಿಸಿದ್ದರು. ನಿನ್ನೆ ಮಧ್ಯರಾತ್ರಿ ಖಾತೆಗಳ ಹಂಚಿಕೆಗೆ ಗವರ್ನರ್ ಸಮ್ಮತಿ ನೀಡಿದ್ದರು.