ಬೆಂಗಳೂರು,ಫೆ.25-ಶ್ರೀ ಮಲೈಮಹದೇಶ್ವರ ಸ್ವಾಮಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ರಾತ್ರಿ ತಂಗುವಿಕೆಯನ್ನು ಶ್ರೀ ಮಲೈಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣವಾಗಿ ನಿಷೇಧಿಸಿದೆ.
ಫೆ.27ರಂದು ರಾತ್ರಿಯಿಂದ ಮಾ.2ರ ರಾತ್ರಿವರೆಗೆ ಭಕ್ತರು ತಂಗುವಿಕೆಯನ್ನು ನಿಷೇಧಿಸಿದೆ. ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಭಕ್ತಾದಿಗಳು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಈ ನಿಷೇಧ ಏರಲಾಗಿದೆ.
ಫೆ.28ರಿಂದಲೇ ಮಹಾಶಿವರಾತ್ರಿಯ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಮಾ.1ರಂದು ಹಬ್ಬದ ಅಂಗವಾಗಿ ವಿಶೇಷ ಸೇವೆ ಮತ್ತು ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.2ರಂದು ಅಮವಾಸ್ಯೆ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಾ.3ರಂದು ಬೆಳಗ್ಗೆ 8.10ರಿಂದ 8.45ರವರೆಗೆ ಮಹಾರಥೋತ್ಸವ ನಡೆಯಲಿದೆ. ಹಾಗೆಯೇ ರಾತ್ರಿ ಅಭಿಷೇಕ ನಡೆದ ನಂತರ ಕೊಂಡೋತ್ಸವ ನಡೆಸಲಾಗುವುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಧರ್ಮದರ್ಶನ ಬೆಳಗ್ಗೆ 6.30ರಿಂದ ಸಂಜೆ 5.30ರವರೆಗೆ ಹಾಗೂ ರಾತ್ರಿ 8.30ರಿಂದ 10ರವರೆಗೆ ನಡೆಯಲಿದ್ದು, ಪ್ರತಿ ದಿನ ಸಂಜೆ 7 ಗಂಟೆಗೆ ಬಂಗಾರದ ರಥೋತ್ಸವ ನಡೆಯಲಿದೆ.
