ನವದೆಹಲಿ, ಜು.19- ಶಿವಸೇನೆ ಸಂಸದೀಯ ಪಕ್ಷದಲ್ಲಿ ವಿಭಜನೆ ಸನ್ನಿಹಿತವಾಗುತ್ತಿರುವ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ದೆಹಲಿಯಲ್ಲಿ ಪಕ್ಷದ ಸಂಸದರನ್ನು ಭೇಟಿ ಮಾಡಲಿದ್ದಾರೆ.
ಉದ್ಧವ್ ಠಾಕ್ರೆ ಅವರು ಸಲ್ಲಿಸಿರುವ 16 ಶಾಸಕರ ವಿರುದ್ಧದ ಅನರ್ಹತೆ ಅರ್ಜಿ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಇದರ ಕುರಿತು ಚರ್ಚೆಗೆ ದೆಹಲಿಗೆ ಆಗಮಿಸಿರುವ ಏಕನಾಥ್ ಶಿಂಧೆ, ಶಿವಸೇನೆಯ ಸಂಸದರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಸೇನೆ ಮುಖ್ಯ ನಾಯಕರಾಗಿ ಪಟ್ಟಕ್ಕೇರಿದ ದಿನದ ಬಳಿಕ ಶಿಂಧೆ ಮಂಗಳವಾರ ದೆಹಲಿಗೆ ಆಗಮಿಸಿದ್ದಾರೆ. ಶಿವಸೇನೆ ವಿಭಜನೆಯತ್ತ ಸಾಗಿದೆ. ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಸಂಸದರನ್ನು ಶಿಂಧೆ ಭೇಟಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಿಂಧೆ, ನಾನು ಖಂಡಿತವಾಗಿಯೂ ಸಂಸದರನ್ನು ಭೇಟಿ ಮಾಡುತ್ತೇನೆ. ಶಿವಸೇನೆಯ ತಮ್ಮ ಬಣದ14 ಸಂಸದರಷ್ಟೆ ಅಲ್ಲ, ನಮ್ಮ ಪಕ್ಷದ ಒಟ್ಟು 18 ಮಂದಿ ಸಂಸದರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗ (ಒಬಿಸಿ) ಮೀಸಲಾತಿ ವಿಚಾರವಾಗಿಯೂ ಸುಪ್ರೀಂಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯುವುದರಿಂದ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು. ಒಬಿಸಿಗಳಿಗೆ ನ್ಯಾಯ ಒದಗಿಸಲು ಮಹಾರಾಷ್ಟ್ರ ಸರ್ಕಾರ ಬದ್ಧವಾಗಿದೆ ಎಂದು ಶಿಂಧೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಶಿವಸೇನೆಯ ಪ್ರತ್ಯೇಕ ಗುಂಪಿನ ಸಂಸದರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿ ಮಾಡಿ, ಸಂಸತ್‍ನಲ್ಲಿ ತಮಗೆ ಪ್ರತ್ಯೇಕ ಸ್ಥಾನಗಳನ್ನು ನೀಡುವ ಒತ್ತಾಯ ಮಾಡಲಿದ್ದಾರೆ.