ಬೆಂಗಳೂರು,ಮಾ.15- ಬೆಳಗಾವಿ ಜಿಲ್ಲೆಯ ಆಯ್ದ ಭಾಗದಲ್ಲಿ ಆರೋಗ್ಯ ಹಾಗೂ ಇತರ ಯೋಜನೆಗಳಿಗೆ ಮಹಾರಾಷ್ಟ್ರ ಸರ್ಕಾರ 54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ ನಮ್ಮ ಸ್ವಾಭಿಮಾನವನ್ನು ಕೆಣಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ರಾಜ್ಯದ ಗಡಿ ಭಾಗದಲ್ಲಿ ಬೆಳಗಾವಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅಭಿವೃದ್ದಿ ಕೆಲಸ ಕೈಗೊಳ್ಳಲು ಹಣ ಬಿಡುಗಡೆ ಮಾಡಿರುವುದು ಖಂಡನೀಯ. ಇದಕ್ಕೆ ಅವಕಾಶ ನೀಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮ ನೆಲ, ಜಲ, ಭಾಷೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪ್ರಾಣ ಹೋದರು ರಾಜ್ಯದ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ನಾಡಿನ ಕನ್ನಡ ಪರ ಸಂಘಟನೆಗಳು, ಕಲಾವಿದರು, ಸಾಹಿತಿಗಳು ಈ ವಿಷಯದಲ್ಲಿ ಧ್ವನಿ ಎತ್ತಬೇಕು, ಜನಾಂದೋಲನ ನಡೆಯಬೇಕು. ನೆರೆ ರಾಷ್ಟ್ರದ ಹುನ್ನಾರವನ್ನು ಹತ್ತಿಕ್ಕಬೇಕು ಎಂದು ಕರೆ ನೀಡಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಪದೇ ಪದೇ ನಾಡಿನ ಸ್ವಾಭಿಮಾನವನ್ನು ಕೆಣಕುತ್ತಿದೆ. ನಮ್ಮ ರಾಜ್ಯದ ನೆಲದಲ್ಲಿ ಆರೋಗ್ಯ ಯೋಜನೆಗೆ ಹಣ ಬಿಡುಗಡೆ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈವರೆಗೂ ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗೃಹ ಸಚಿವರು ಏನು ಮಾಡುತ್ತಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹಸ್ತಕ್ಷೇಪ ಮಾಡಿ ಮತ್ತೊಂದು ರಾಜ್ಯ ಹಣ ಬಿಡುಗಡೆ ಮಾಡಲು ಸಾಧ್ಯವೇ. ಹಲವು ವರ್ಷಗಳಿಂದ ನಮ್ಮದೆ ಸಂಪನ್ಮೂಲದಿಂದ ನಾವು ಅಭಿವೃದ್ಧಿ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ಈಗ ನೆರೆಯ ರಾಜ್ಯ ಹಣ ಬಿಡುಗಡೆ ಮಾಡುವುದು ಎಂದರೇ ಏನರ್ಥ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ತಾವು ನಾಳೆಯೇ ಬೆಳಗಾವಿಗೆ ಭೇಟಿ ನೀಡುತ್ತಿದ್ದು, ಮುಂದಿನ ಕಾರ್ಯತಂತ್ರಗಳ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
Maharashtra, government, release, funds, Karnataka, kpcc, president, dk shivakumar,