ರಾಜ್ಯದೆಲ್ಲೆಡೆ ಸಡಗರ-ಸಂಭ್ರಮದ ಶಿವರಾತ್ರಿ

Social Share

ಬೆಂಗಳೂರು, ಮಾ.1- ಯೋಗೀಶ್ವರನಾದ ಪರಶಿವನು ಶೀಘ್ರ ವರಪ್ರದಾಯಕ. ಏಕಬಿಲ್ವಂ ಶಿವಾರ್ಪಣಂ ಎಂದ ಮಾತ್ರಕ್ಕೆ ಆತ ಸಂತೃಪ್ತನಾಗುತ್ತಾನೆ. ಶಿವನ ಜನ್ಮದಿನವಾದ ಶಿವರಾತ್ರಿಯಂದು ಮನುಕುಲದಲ್ಲಿ ವಿಶೇಷ ಜಾಗೃತಿ, ತೇಜಸ್ಸು ಮೂಡುತ್ತದೆ. ಇದು ಶಿವ ಹಾಗೂ ಶಕ್ತಿಯ ಸಮಾಗಮದ ಫಲ.
ಇಂದು ಮಹಾಶಿವರಾತ್ರಿ. ಶಿವ-ಪಾರ್ವತಿಯರ ಪರಿಣಯದ ಶುಭದಿನ. ಮಹಾ ಶಿವರಾತ್ರಿಯನ್ನು ಭಕ್ತಾದಿಗಳು ಭಕ್ತಿ-ಸಡಗರದಿಂದ ಆಚರಿಸುತ್ತಾರೆ.ಕೊರೊನಾ ಸೋಂಕಿನಿಂದ ಎರಡು ವರ್ಷದಿಂದ ಹಬ್ಬದ ಸಂಭ್ರಮವಿಲ್ಲದೆ ಮಂಕಾಗಿತ್ತು. ಕೊರೊನಾ ಆತಂಕ ದೂರವಾದ ಹಿನ್ನೆಲೆಯಲ್ಲಿ ಜನ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ನಾಡಿನೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ. ದೇವಸ್ಥಾನಗಳಿಗೆ ಭಕ್ತಗಣ ಸಾಗರೋಪಾದಿಯಲ್ಲಿ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದೆ. ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಿದೆ. ದಕ್ಷಿಣ ಕಾಶಿ ಗೋಕರ್ಣದಲ್ಲಿ ಆತ್ಮಲಿಂಗ ದರ್ಶನಕ್ಕೆ ಇಂದು ಬೆಳಗ್ಗೆಯಿಂದಲೇ ಭಕ್ತಸಾಗರ ಹರಿದುಬಂದಿತ್ತು.
ಶಿವರಾತ್ರಿಯ ದಿನವಾದ ಇಂದು ಆತ್ಮಲಿಂಗವನ್ನು ಮುಟ್ಟಿದರೆ ಕಷ್ಟಗಳು ಬಗೆಹರಿಯುತ್ತವೆ, ಪಾಪಗಳು ನಾಶವಾಗುತ್ತವೆ. ನಮ್ಮ ಬೇಡಿಕೆಗಳು ಈಡೇರುತ್ತವೆ ಎಂಬ ಪ್ರತೀತಿ ಇದೆ. ಹಾಗಾಗಿ ಭಕ್ತರು ಮಹಾಬಲೇಶ್ವರ ದೇವಸ್ಥಾನದ ಎದುರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದುದು ಕಂಡುಬಂತು.
ರಾಜ್ಯದಿಂದ ಮಾತ್ರವಲ್ಲದೆ ದೇಶದ ಬೇರೆ ಕಡೆಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಆತ್ಮಲಿಂಗ ದರ್ಶನಕ್ಕೆ ಭಕ್ತರು ಹರಿದು ಬರುತ್ತಿದ್ದರು.ಕೋಟಿ ಲಿಂಗೇಶ್ವರ, ನಂಜನಗೂಡಿನ ನಂಜುಂಡೇಶ್ವರ, ಮಲೈ ಮಹದೇಶ್ವರ ಸೇರಿದಂತೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಿಶೇಷ ಪೂಜೆಗಳನ್ನು ನೆರವೇರಿಸಿ ಭಗವಂತನ ಕೃಪೆಗೆ ಪಾತ್ರರಾದರು.
ರಾಜಧಾನಿ ಬೆಂಗಳೂರು ನಗರದ ದೇವಾಲಯಗಳಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಹರಿದು ಬಂದಿತು. ಮುಂಜಾನೆಯಿಂದಲೇ ಕಿಲೋ ಮೀಟರ್‍ಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತವೆ. ಈಶ್ವರ ಅಭಿಷೇಕ ಪ್ರಿಯ.
ಹಾಗಾಗಿ ಬೆಳಗ್ಗೆ 6 ಗಂಟೆಯಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವ ಪತ್ರಾರ್ಪಣೆ ಸೇರಿದಂತೆ ನಾನಾ ಅಭಿಷೇಕಗಳನ್ನು ನೆರವೇರಿಸಲಾಗುತ್ತದೆ. ಇಡೀ ದಿನ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಜಾಗರಣೆ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪೂಜೆಗಳು ಜರುಗಲಿವೆ. ಇಂದು ಜಾಗರಣೆ, ಉಪವಾಸ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಆಸ್ತಿಕ ಭಕ್ತರು ಉಪವಾಸವಿದ್ದು, ಎಲ್ಲೆಡೆ ಶಿವನಾಮ ಸ್ಮರಣೆಯಲ್ಲಿ ತೊಡಗಿದ್ದಾರೆ.
ನಗರದ ಪುರಾತನ ದೇವಾಲಯಗಳಾದ ಗವಿ ಗಂಗಾಧರೇಶ್ವರ, ಕಾಶಿ ವಿಶ್ವನಾಥ, ಕಾಡು ಮಲ್ಲೇಶ್ವರ, ಚಾಮರಾಜಪೇಟೆಯ ಮಲೈ ಮಹದೇಶ್ವರ, ಜಲಕಂಠೇಶ್ವರ, ಹಲಸೂರು ಸೋಮೇಶ್ವರ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ನೆರವೇರಿದ್ದು, ರಾತ್ರಿ 12 ಗಂಟೆಯಿಂದ ಗಿರಿಜಾ ಕಲ್ಯಾಣೋತ್ಸವ ನಡೆಯಲಿದೆ.
ನಾಳೆ ಬೆಳಗ್ಗೆ 10 ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದೆ. ವಿಶೇಷವಾಗಿ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ನಿರಂತರ ಜಲಾಭಿಷೇಕ ನಡೆಯಲಿದೆ. ಭಕ್ತಾದಿಗಳು ಬೆಳಗ್ಗೆಯಿಂದಲೇ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

Articles You Might Like

Share This Article