ಶೈಕ್ಷಣಿಕ ಮಾನದಂಡದಿಂದ ಕಲಾವಿದರಿಗೆ ವಿನಾಯ್ತಿ : ಡಾ.ಮಹೇಶ್ ಜೋಷಿ

Social Share

ಬೆಂಗಳೂರು,ಫೆ.18- ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಶುಲ್ಕ 250 ರೂ.ಗಳಿಗೆ ಕಡಿತಗೊಳಿಸುವುದು, ಪರಿಷತ್‍ನ ತಂತ್ರಜ್ಞಾನ ಅಳವಡಿಕೆಗೆ ಆ್ಯಪ್ ರಚನೆ, ಸದಸ್ಯತ್ವಕ್ಕೆ ನಿಗದಿಪಡಿಸಿರುವ ಶೈಕ್ಷಣಿಕ ಮಾನದಂಡಗಳಿಂದ ಕಲಾವಿದರಿಗೆ ವಿನಾಯ್ತಿ ನೀಡುವುದು ಸೇರಿದಂತೆ ಕಸಾಪ ನಿಬಂಧನೆಗಳ ತಿದ್ದುಪಡಿ ಸಮಿತಿ ಮಾಡಿರುವ ಶಿಫಾರಸ್ಸಿಗೆ ಬಹುತೇಕ ಸಹಮತ ವ್ಯಕ್ತವಾಗಿದೆ.
ಕನ್ನಡ ಸಾಹಿತ್ಯ ಪರಿಷತ್‍ನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಪರಿವರ್ತಿಸಲು ಒಂದು ಕೋಟಿ ಸದಸ್ಯತ್ವದ ಗುರಿ ಹೊಂದಿರುವುದರಿಂದ ಸದಸ್ಯತ್ವ ಮತ್ತು ಕನ್ನಡ ನುಡಿ ಶುಲ್ಕ ಇಳಿಸಲು ತೀರ್ಮಾನಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ತಿಳಿಸಿದ್ದಾರೆ.
ನಿನ್ನೆ ಕಸಾಪ ನಿಬಂಧನೆಗಳ ತಿದ್ದುಪಡಿ ಸಮಿತಿ ನೀಡಿರುವ ಶಿಫಾರಸ್ಸುಗಳ ಬಗ್ಗೆ ಸಾಹಿತಿಗಳು, ಸಂಸ್ಕøತಿ ಚಿಂತಕರು, ಜಾನಪದ ಕಲಾವಿದರು, ಕನ್ನಡಪರ ಹೋರಾಟಗಾರರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನ ಬದಲಾವಣೆ ಜೊತೆಗೆ ಕಾನೂನಾತ್ಮಕ ಬದಲಾವಣೆಗಳ ಆಗುವುದರಿಂದ ಚುನಾವಣಾ ಆಯೋಗ ಹೊಸ ಆವಿಷ್ಕಾರ, ಪ್ರಯೋಗಗಳನ್ನು ನಡೆಸಬಹುದಾಗಿರುವುದರಿಂದ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ತಿದ್ದುಪಡಿ ಕಾರ್ಯವನ್ನು 2025ರಲ್ಲಿ ಕೈಗೊಳ್ಳುವುದಾಗಿ ಅವರು ಹೇಳಿದರು.
ಜಾನಪದ, ರಂಗಭೂಮಿ, ಚಿತ್ರಕಲಾ, ಕರಕುಶಲ ಕಲಾವಿದರನ್ನು ವಿಶೇಷವಾಗಿ ಪರಿಗಣಿಸಿ ಅವರಿಗೆ ಶೈಕ್ಷಣಿಕ ಮಾನದಂಡಗಳಿಂದ ವಿನಾಯ್ತಿ ನೀಡಲು ತೀರ್ಮಾನಿಸಲಾಗಿದೆ. ಹೊಸ ಸದಸ್ಯತ್ವದ ಅರ್ಜಿಯನ್ನು ಆನ್‍ಲೈನ್ ಮೂಲಕ ನೊಂದಾಯಿಸಲು ಓದು ಬರಹ ಬಲ್ಲ ವ್ಯಕ್ತಿಗಳಿಗೆ ಸದಸ್ಯತ್ವ ನೀಡುವ ಸಂಬಂಧ ನಿಗದಿಪಡಿಸಿರುವ ಮಾನದಂಡಗಳ ಕುರಿತು ನಿಬಂಧನೆಗಳಿಗೆ ತಿದ್ದುಪಡಿ ತರುವುದು ಅವಶ್ಯವಾಗಿದೆ ಎಂದು ಹೇಳಿದರು.
ಪರಿಷತ್‍ನ ಮೂಲ ಉದ್ದೇಶಗಳಿಗೆ ಯಾವ ಧಕ್ಕೆಯೂ ಬರದಂತೆ ರೂಪಿಸಿರುವ ಅಮೂಲಾಗ್ರ ಬದಲಾವಣೆಗಳನ್ನು ಜಾರಿಗೆ ತಂದು ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶ ಯಶಸ್ವಿಯಾಗಲಿ ಎಂದು ನ್ಯಾಯಮೂರ್ತಿ ಅರಳಿ ನೇತೃತ್ವದ ತಿದ್ದುಪಡಿ ಸಮಿತಿ ಹೇಳಿದೆ.
ಸಮಾಲೋಚನಾ ಸಭೆಯಲ್ಲಿ ಹಾಜರಿದ್ದ ಕನ್ನಡಪರ ಮತ್ತು ಸಂಸ್ಕøತಿ ಚಿಂತಕರಾದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ, ಹಿರಿಯ ಸಾಹಿತಿಗಳಾದ ಡಾ.ಪ್ರಧಾನ್ ಗುರುದತ್, ನಾಡೋಜ ಡಾ.ಕಮಲಾ ಹಂಪನ, ಡಾ.ದೊಡ್ಡರಂಗೇಗೌಡ, ಕರ್ನಾಟಕ ಲೇಖಕಿಯರ ಸಂಘದ ವನಮಾಲ ಸಂಪನ್ನಕುಮಾರ್ ಸೇರಿದಂತೆ ಹಲವರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಸಾಹಿತ್ಯ ಪರಿಷತ್‍ನ ಅಮೂಲಾಗ್ರ ಬದಲಾವಣೆಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಪರಿಷತ್‍ನ ಮಹಾಪೆÇೀಷಕರಾಗಲು ಒಂದು ಲಕ್ಷ ರೂ.ಗಳನ್ನು ನೀಡುವುದಾಗಿ ಹೇಳಿದರು. ಪರಿಷತ್‍ನ ಗೌರವ ಕಾರ್ಯದರ್ಶಿಗಳಾದ ನೇ.ಬ.ರಾಮಲಿಂಗ ಶೆಟ್ಟಿ, ಪಟೇಲ್ ಪಾಂಡು ಮುಂತಾದವರು ಈ ಸಂದರ್ಭದಲ್ಲಿ ಇದ್ದರು.

Articles You Might Like

Share This Article