ಲಾರಿ-ಖಾಸಗಿ ಬಸ್ ನಡುವೆ ಭೀಕರ ಅಪಘಾತ, 8 ಮಂದಿ ದುರ್ಮರಣ

ಹುಬ್ಬಳ್ಳಿ, ಮೇ 24- ಧಾರವಾಡದ ಬಾಡಾ ಬಳಿ ಕ್ರೂಸರ್ ಮರಕ್ಕೆ ಡಿಕ್ಕಿ ಹೊಡೆದು 9 ಮಂದಿ ದುರ್ಮರಣಕ್ಕೀಡಾದ ಘಟನೆ ಮಾಸುವ ಮುನ್ನವೇ ತಡರಾತ್ರಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾರಿಹಾಳ ಬಳಿ ಸಂಭವಿಸಿದೆ.

ಅಪಘಾತ ನಡೆದ ಸ್ಥಳದಲ್ಲಿ ಆರು ಮಂದಿ ಹಾಗೂ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜ್, ಪ್ರಯಾಣಿಕರಾದ ಇಚಲ ಕರಂಜಿಯಾ ಬಾಬಾಸಾ ಅಣ್ಣಾಸ ಚೌಗಲೆ, ಚಿಕ್ಕೋಡಿಯ ಬಾಬಾಸಾಬ್, ಮೈಸೂರು ಮೂಲದ ಮಹಮ್ಮದ್ ಎಂದು ಗುರುತಿಸಲಾಗಿದ್ದು, ಉಳಿದವರ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ.

ದುರ್ಘಟನೆಯಲ್ಲಿ ಬಸ್‍ನಲ್ಲಿದ್ದ 26 ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ನ್ಯಾಷನಲ್ ಟ್ರಾವೆಲ್ಸ್‍ಗೆ ಸೇರಿದ ಖಾಸಗಿ ಬಸ್ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಹುಬ್ಬಳ್ಳಿಯ ತಾರಿಹಾಳ್ ಬಳಿ ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್‍ ಅನ್ನು ಓವರ್‍ ಟೇಕ್ ಮಾಡುವ ಭರದಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಅಪಘಾತದ ರಭಸಕ್ಕೆ ಲಾರಿಯು ಟ್ರ್ಯಾಕ್ಟರ್ ಮೇಲೆ ವಾಲಿ ಬಿದ್ದಿದ್ದು, ಅದೃಷ್ಟವಶಾತ್ ಅದರಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.
ಅಪಘಾತದ ಭೀಕರತೆಗೆ ಮೃತದೇಹಗಳು ವಾಹನದೊಳಗೆ ಗುರುತು ಸಿಗಲಾರದಷ್ಟು ಅಪ್ಪಚ್ಚಿಯಾಗಿದ್ದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಅಪಘಾತದಿಂದ ನಜ್ಜುಗುಜ್ಜಾಗಿದ್ದ ಎರಡೂ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿಯಿಂದ ತೆರವುಗೊಳಿಸಿ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ದಿಗ್ಭ್ರಮೆ: ಈ ದುರಂತಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಅಪಘಾತದಲ್ಲಿ ಅಸುನೀಗಿದವರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಸಾವಿನ ರಹದಾರಿ: ಅಪಘಾತ ಸಂಭವಿಸಿದ ಕೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಪದೇ ಪದೇ ದುರಂತಗಳು ಸಂಭವಿಸುತ್ತಿವೆ. ಅದು ಸಾವಿನ ಹೆದ್ದಾರಿಯಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆ ಅಪಘಾತಗಳಾಗದಂತೆ ತಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.