ರಾಜ್ಯದೆಲ್ಲೆಡೆ ಮನೆಮಾಡಿದ ಸಂಭ್ರಮದ ಸಂಕ್ರಾಂತಿ

Social Share

ಬೆಂಗಳೂರು, ಜ.15- ರಾಜ್ಯದೆಲ್ಲೆಡೆ ಇಂದು ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದ್ದು, ಭಕ್ತರು ದೇವರ ದರ್ಶನ ಪಡೆದರು.

ರಾಜಧಾನಿ ಬೆಂಗಳೂರಿನಲ್ಲಿ ಕಾಡು ಮಲ್ಲೇಶ್ವರ, ಬಸವನಗುಡಿಯ ದೊಡ್ಡಬಸವಣ್ಣ, ಕೆಆರ್ ಮಾರುಕಟ್ಟೆಯ ವೆಂಕಟರಮಣ, ಹಲಸೂರಿನ ಸೋಮೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಪೂಜಾ ಕೈಂಕರ್ಯಗಳು ನೆರವೇರಿತ್ತು.

ಉದ್ಯನಗರಿಯಲ್ಲೂ ಕಿಚ್ಚಾಯಿದ ರಾಸುಗಳು. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಂಕ್ರಾಂತಿ ಹಬ್ಬದಂದು ಗೋವುಗಳಿಗೆ ಪೂಜೆ ಮಾಡಿ ಅಲಂಕರಿಸಿ ಕಿಚ್ಚು ಹಾಯಿಸುತ್ತಾರೆ. ನಗರದಲ್ಲೂ ಸಹ ನಮ್ಮ ಹಳ್ಳಿ ಸೊಬಗು ನೋಡಬಹುದು. ಇಂದು ರಾಜರಾಜೇಶ್ವರಿ ನಗರ, ಮತ್ತಿಕೆರೆ, ಯಶವಂತ ಪುರ, ಯಲಹಂಕ ಸೇರಿದಂತೆ ವಿವಿಧಡೆ ಸಂಘ-ಸಂಸ್ಥೆಗಳು ರಾಸುಗಳಿಗೆ ಕಿಚ್ಚಾಯಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಹಳ್ಳಿಗಳಲ್ಲೂ ಸಂಭ್ರಮ:
ಕಷ್ಟಪಟ್ಟು ಬೆಳೆದ ದವಸ ಧಾನ್ಯಗಳನ್ನು ರಾಶಿ ಮಾಡಿ ಪೂಜೆ ಸಲ್ಲಿಸಿ ನಂತರ ವರ್ಷವಿಡೀ ದುಡಿದ ರಾಸುಗಳ ಮೈತೊಳೆದು ವಿಶೇಷವಾಗಿ ಅಲಂಕರಿಸಿ ಗೆಣಸು, ಕಡಲೇಕಾಯಿ, ಅವರೇಕಾಯಿ, ಕಬ್ಬು, ಎಳ್ಳುಬೆಲ್ಲವನ್ನು ಗೋವುಗಳಿಗೆ ಸಮರ್ಪಿಸುತ್ತಾರೆ. ಇಂದು ಸಂಜೆ ವಿವಿಧ ಗ್ರಾಮಗಳಲ್ಲಿ ರಾಸುಗಳಿಗೆ ಕಿಚ್ಚಾಯಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು, ಇಂದು ವಿವಿಧೆಡೆ ಕಿಚ್ಚಾಯಿಸಲಾಯಿತು.

ಬೆಂಕಿಯನ್ನು ಗೋವುಗಳು ದಾಟುವುದರಿಂದ ಯಾವುದೇ ರೋಗ- ರುಜಿನಗಳು ಬರುವುದಿಲ್ಲ ಎಂಬುದು ಅನ್ನದಾತರ ನಂಬಿಕೆ. ಹಾಗಾಗಿ ರೈತರು ಕಿಚ್ಚಾಯಿಸುವ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

ಗಂಗಾಧರೇಶ್ವರ ಸ್ವಾಮೀಜಿ ಸೂರ್ಯರಶ್ಮಿ:
ಪಂಚಾಂಗದ ಪ್ರಕಾರ ಸಂಕ್ರಾಂತಿ ಹಬ್ಬದೊಂದು ಉತ್ತರಾಯನ ಪುಣ್ಯಕಾಲ ಪ್ರವೇಶ ಆರಂಭವಾಗಲಿದ್ದು, ದಕ್ಷಿಣಾಯನ ಪಥ ಮುಗಿಸಿ ಉತ್ತರಾಯನಕ್ಕೆ ಸಾಗುವ ಸೂರ್ಯದೇವನು ಶಿವನ ದರ್ಶನ ಪಡೆದು ಸಾಗುತ್ತಾನೆ.

ಹಾಗಾಗಿ ಇಂದು ಸಂಜೆ ಪ್ರತಿ ವರ್ಷದಂತೆ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯನ ಕಿರಣಗಳು ಬೀಳಲಿದೆ. ಸಂಜೆ 5.20ರಿಂದ 5.36ರ ಒಳಗೆ ಸೂರ್ಯರಶ್ಮಿ ಬೀಳಲಿದ್ದು, ಈ ರಮಣಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿದ್ದಾರೆ.

ಇದಕ್ಕಾಗಿ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದೇವಾಲಯದ ಹೊರ ಭಾಗದಲ್ಲಿ ಬೃಹತ್ ಪರದೆಯ ಎಲ್ಇಡಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಅದರಲ್ಲಿ ಸೂರ್ಯರಶ್ಮಿ ದೃಶ್ಯವನ್ನು ನೋಡಬಹುದಾಗಿದೆ. ಗಂಗಾಧರೇಶ್ವರ ಸ್ವಾಮೀಜಿ ಸೂರ್ಯಾಭಿಷೇಕ ಆಗುವ ಸಂದರ್ಭದಲ್ಲಿ ವಿಶೇಷ ಅಭಿಷೇಕ ಮಾಡಿ ನಂತರ ಪೂಜೆ ನಡೆಸಲಾಗುವುದು.

Articles You Might Like

Share This Article