ಮಳವಳ್ಳಿ ಠಾಣೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಗಳಿಗೆ ಸೀಮಂತ

Police-Station-Malavalli
ಮಳವಳ್ಳಿ, ಜೂ.30- ಪೊಲೀಸ್ ಕೆಲಸ ಅಂದ್ರೆ ಒತ್ತಡದ ಕೆಲಸ ಪ್ರತಿ ನಿತ್ಯ ಒಂದಲ್ಲ ಒಂದು ಒತ್ತಡ ಇದ್ದೇ ಇರುತ್ತೆ. ಇಂತಹ ಪರಿಸ್ಥಿತಿಯಲ್ಲಿ ಹೇಗೆ ಅವರು ಸಂತಸ ಪಡಲು ಸಾಧ್ಯ ಹೇಳಿ. ಇನ್ನು ಕುಟುಂಬ ಸದಸ್ಯರು , ಬಂಧು ಬಳಗದ ಜೊತೆ ಸಂತಸದ ಕ್ಷಣ ಕಳೆಯಲು ಸಾಧ್ಯವಿಲ್ಲ. ಇದನ್ನು ಅರಿತ ಮಳವಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಇಲಾಖೆಯ ಇಬ್ಬರು ಮಹಿಳೆಯರಿಗೆ ಠಾಣೆಯಲ್ಲೇ ಸೀಮಂತ ಮಾಡಿ ಸಂತಸದ ಕ್ಷಣ ಸವಿದಿದ್ದಾರೆ.

ಪಟ್ಟಣದ ಪುರ ಠಾಣೆಯಲ್ಲಿ ಕಾನ್‍ಸ್ಟೇಬಲ್‍ಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಗರ್ಭಿಣಿಯರಾದ ಪ್ರೇಮಾ ಮತ್ತು ಶೃತಿ ಅವರಿಗೆ ಠಾಣೆಯಲ್ಲೇ ಸಂಪ್ರದಾಯ ಬದ್ಧವಾಗಿ ಸೀಮಂತ ನೆರವೇರಿಸುವ ಮೂಲಕ ಸಿಬ್ಬಂದಿ ಸಂಭ್ರಮಿಸಿದರು. ಹಲಗೂರು ಹೋಬಳಿಯ ಪ್ರೇಮಾ ಚೊಚ್ಚಲ ಗರ್ಭಿಣಿ. ಚನ್ನರಾಯಪಟ್ಟಣ ತಾಲ್ಲೂಕಿನ ಶೃತಿ ಎರಡನೆ ಮಗುವಿಗೆ ತಾಯಿಯಾಗುತ್ತಿದ್ದಾರೆ. ಪುರ ಠಾಣೆಯಲ್ಲೇ ಕೆಲಸ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಿನ್ನೆ ರಾತ್ರಿ ಡಿವೈಎಸ್ಪಿ ಮಲ್ಲಿಕ್, ಸಿಪಿಐಗಳಾದ ಶ್ರೀಕಾಂತ್, ಗಂಗಾಧರ್, ಪಿಎಸ್‍ಐ ಶಿವಮಾದಯ್ಯ ಅವರ ನೇತೃತ್ವ ದಲ್ಲಿ ಸಿಬ್ಬಂದಿ ಪ್ರೇಮಾ ಹಾಗೂ ಶೃತಿ ಅವರಿಗೆ ವಿಶೇಷವಾಗಿ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸೀಮಂತ ಕಾರ್ಯಕ್ರಮದಿಂದ ಪ್ರೇಮಾ ಹಾಗೂ ಶೃತಿ ಅವರ ಕಣ್ಣಾಲೆಗಳು ತುಂಬಿ ಬಂದು ನಮ್ಮ ಮನೆಗಳಲ್ಲೂ ಈ ರೀತಿ ಸೀಮಂತ ಮಾಡುವುದಿಲ್ಲವೇನೋ ಅಷ್ಟರ ಮಟ್ಟಿಗೆ ಪ್ರೀತಿ, ಆದರಗಳಿಂದ ಈ ಕಾರ್ಯವನ್ನು ನೆರವೇರಿಸಿದ್ದಾರೆ ಎಂದು ಗದ್ಗದಿತರಾದರು.
ಕಳೆದ 30 ವರ್ಷಗಳಿಂದ ಇದೇ ಠಾಣೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾದ ನಿಂಗೇಗೌಡ ಅವರನ್ನು ಅವರ ಪತ್ನಿಯವರೊಂದಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಪ್ರೇಮಾ ಹಾಗೂ ಶೃತಿ ಕುಟುಂಬ ದವರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಒತ್ತಡದ ನಡುವೆಯೂ ಸೀಮಂತ ಕಾರ್ಯ ಹಮ್ಮಿಕೊಂಡು ಠಾಣೆಯಲ್ಲಿ ಹಬ್ಬದ ವಾತಾವರಣವನ್ನು ನಿರ್ಮಿಸಲಾಗಿತ್ತು.

Sri Raghav

Admin