ಮಲ್ಲೇಶ್ವರಂ ಶಾಲಾ ಮಾದರಿ ಇಡೀ ರಾಜ್ಯಕ್ಕೆ ವಿಸ್ತರಣೆ : ಸಿಎಂ

Social Share

ಬೆಂಗಳೂರು,ಅ.29-ತಂತ್ರಜ್ಞಾನಾಧಾರಿತ ಆಧುನಿಕ ಕಲಿಕೆ ಮತ್ತು ಸಾಂಪ್ರದಾಯಿಕ ಬೋಧನೆ ಎರಡನ್ನೂ ಹದವಾಗಿ ಸೇರಿಸಿ ರೂಪಿಸಿರುವ ಮಲ್ಲೇಶ್ವರಂ ಸ್ಕೂಲ್ ಮಾಡೆಲ್ ಹೈಬ್ರಿಡ್ ವ್ಯವಸ್ಥೆಯನ್ನು ರಾಜ್ಯಾದ್ಯಂತ ಇರುವ ಸರ್ಕಾರಿ (ಪಬ್ಲಿಕ್) ಶಾಲೆಗಳಲ್ಲಿ ಅಳವಡಿಸಿ ಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಪುನೀತ್ ಉಪಗ್ರಹದ ವರ್ಕ್ ಸ್ಟೇಶನ್, ಮಾನಿಟರಿಂಗ್ ವ್ಯವಸ್ಥೆ, ಮಿನಿ ವಿಜ್ಞಾನ ಸಂಪನ್ಮೂಲ ಕೇಂದ್ರಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಮಕ್ಕಳನ್ನೂ ತಮ್ಮ ಮಕ್ಕಳೆಂದು ಭಾವಿಸಿ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಈ ಕೆಲಸವು ಅಂತಃಕರಣದಿಂದ ಆಗುವಂಥದ್ದು. ಕಟ್ಟಡಗಳನ್ನು ಕಟ್ಟುವುದಕ್ಕಿಂತ ಹೆಚ್ಚಾಗಿ ಕಲಿಕಾ ವ್ಯವಸ್ಥೆಯ ಸುಧಾರಣೆ, ಆಧುನೀಕರಣ, ಡಿಜಿಟಲೀಕರಣ, ವೈಫೈ, ಬ್ರಾಡ್ಬ್ಯಾಂಡ್, ಲ್ಯಾಪ್ಟಾಪ್ ಮತ್ತು ಕೆವೈಸಿ (ನೋ ಯುವರ್ ಚೈಲ್ಡï) ವಿಧಾನಗಳ ಅಳವಡಿಕೆಗೆ ಗಮನ ಕೊಟ್ಟಿರುವ ಮಲ್ಲೇಶ್ವರಂ ಶಾಲಾ ಮಾದರಿ ಅನುಕರಣಯೋಗ್ಯವಾಗಿದೆ ಎಂದರು.

ಇಂತಹ ಮಾದರಿಯು ಮಕ್ಕಳ ಪ್ರತಿಭೆ, ಬುದ್ಧಿಶಕ್ತಿ ಮತ್ತು ಕಲ್ಪನಾಶಕ್ತಿ ಎರಡನ್ನೂ ಹೆಚ್ಚಿಸುತ್ತದೆ. ಮಕ್ಕಳಲ್ಲಿ ಸ್ಥಳೀಯ ಭಾಷೆ, ವಿಜ್ಞಾನ ಮತ್ತು ಗಣಿತಗಳ ಕಲಿಕೆಯ ಕಡೆಗೆ ಒತ್ತು ಕೊಡಬೇಕು. ಇದರಿಂದ ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಬೆಳೆಯುತ್ತದೆ. ಇದರ ಜತೆಗೆ ನೈತಿಕ ಮತ್ತು ಗುಣಾತ್ಮಕ ಕಲಿಕೆಯ ಗುರಿಯನ್ನು ಸಾಧಿಸಬೇಕು ಎಂದು ಅವರು ನುಡಿದರು.

ಶಿಕ್ಷಕರು ಮಕ್ಕಳಲ್ಲಿ ಇರುವ ಮುಗ್ಧತೆ ಮತ್ತು ಕುತೂಹಲ ಎರಡನ್ನೂ ಹತ್ತನೇ ತರಗತಿಯವರೆಗೆ ಜೀವಂತವಾಗಿ ಉಳಿಸಬೇಕು. ಮಕ್ಕಳಲ್ಲಿರುವ ಅಗಾಧ ನೆನಪಿನ ಕೋಶಕ್ಕೆ ಅದ್ಭುತವಾದ ಸಂಗತಿಗಳನ್ನು ಪೂರೈಸಿ, ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸಬೇಕು. ಆಗ ಮಾತ್ರ ಶಿಕ್ಷಕರು ನಂಬರ್ 1 ಎನಿಸಿಕೊಳ್ಳುತ್ತಾರೆ. ದುರಂತವೆಂದರೆ, ನಮ್ಮ ದೇಶದಲ್ಲಿ ಚೆನ್ನಾಗಿ ಕಲಿತವರು ಏನನ್ನೂ ಅರಿಯದವರನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಇದು ಜ್ಞಾನದ ಶತಮಾನವಾಗಿದೆ. ಕಲಿತಿದ್ದನ್ನು ಹಂಚಿಕೊಳ್ಳುವುದರಿಂದ ಅದು ಶಾಶ್ವತವಾಗಿ ಉಳಿಯುತ್ತದೆ. ಬಡಮಕ್ಕಳ ಕಲಿಕೆಗೆ ನೆರವಾಗಲು ಸಂಸ್ಥೆಯನ್ನು ನಡೆಸುತ್ತಿದ್ದ ದಿವಂಗತ ನಟ ಪುನೀತ್ ಅವರ ಸ್ಮರಣಾರ್ಥ ಉಪಗ್ರಹ ಅಭಿವೃದ್ಧಿ ಪಡಿಸುವ ಮೂಲಕ, ಈ ಸರ್ಕಾರಿ ಶಾಲೆಯ ಮಕ್ಕಳು ಅವರ ಕೀರ್ತಿಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಅವರು ಶ್ಲಾಘಿಸಿದರು.

ಜತೆಗೆ, ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ದೇಶದಲ್ಲಿ ಅಭಿವೃದ್ಧಿ ಪಡಿಸುತ್ತಿರುವ 75 ಉಪಗ್ರಹಗಳಲ್ಲಿ ಇದು ಒಂದಾಗಿದೆ. ಈ ಶಾಲೆಯ ಮಕ್ಕಳು ಇನ್ನೂ ದೊಡ್ಡ ಮತ್ತು ಬಹುಪಯೋಗಿ ಉಪಗ್ರಹವನ್ನು ಅಭಿವೃದ್ಧಿ ಪಡಿಸಲು ಮುಂದಾದರೆ ಅದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅವರು ಆಶ್ವಾಸನೆ ನೀಡಿದರು.

ಮಲ್ಲೇಶ್ವರಂ ಶಾಲಾ ಮಾದರಿ ವೈಜ್ಞಾನಿಕ: ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸಿ.ಎನ್ .ಅಶ್ವತ್ಥನಾರಾಯಣ, ಮಲ್ಲೇಶ್ವರಂ ಶಾಲಾ ಮಾದರಿಯು ಅತ್ಯಂತ ವೈಜ್ಞಾನಿಕವಾಗಿದೆ. ಈಗಾಗಲೇ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಂಗನಾಡಿಗಳಲ್ಲಿ ಮಾಂಟೆಸರಿ ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ. ಜತೆಗೆ ಪ್ರಾಥಮಿಕ ತರಗತಿಗಳಲ್ಲಿ ನಾಲ್ಕು ಮಕ್ಕಳಿಗೆ ತಲಾ ಒಂದು ಲ್ಯಾಪ್ಟಾಪ್, ಪ್ರೌಢಶಾಲಾ ಹಂತದಲ್ಲಿ ಪ್ರತೀ ವಿದ್ಯಾರ್ಥಿಗೂ ಟ್ಯಾಬï, ಎಲ್ಲಾ ತರಗತಿಗಳಿಗೂ ಸ್ಮಾರ್ಟ್ ಬೋರ್ಡ್, ವೈಫೈ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು

ಪುನೀತ್‍ಗೆ ಗೌರವ ಸಲ್ಲಿಸಿದ KMF.

ಈ ಮಾದರಿಯಡಿಯಲ್ಲಿ ಮಲ್ಲೇಶ್ವರಂ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆಗಳಿಗೂ ಹೈಟೆಕ್ ಪ್ರಯೋಗಾಲಯ, ಆಟದ ಮೈದಾನ, ಗ್ರಂಥಾಲಯ ಮತ್ತು ಶೌಚಾಲಯ ಸೌಲಭ್ಯ ಗಳನ್ನು ಒದಗಿಸಲಾಗುವುದು. ಹಾಗೆಯೇ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಆಪ್ತ ಸಮಾಲೋಚನೆ, ಕೆವೈಸಿಯಲ್ಲಿ ಕಲಿಕೆಗೆ ಮಾಹಿತಿ ತಂತ್ರಜ್ಞಾನದ ಬಳಕೆಯ ಜತೆಗೆ ಮಗುವಿನ ಆಸಕ್ತಿ, ಕಲಿಕೆಯ ವೇಗ ಮತ್ತು ಅಗತ್ಯ ಮಾಹಿತಿಗಳ ಸಂಗ್ರಹಣೆ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಸನ್ನ, ಶಿಕ್ಷಣ ಇಲಾಖೆಯ ಅಕಾರಿಗಳಾದ ಉಮಾದೇವಿ, ಶ್ರೀರಾಮ ರೆಡ್ಡಿ ಇದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉನ್ನತಾಧಿಕಾರಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅವರು, 3.50 ಕೋಟಿ ರೂ. ವೆಚ್ಚದ ಸಭಾಂಗಣ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು.

Articles You Might Like

Share This Article