ಜಾತ್ಯಾತೀತ ಪಕ್ಷಗಳು ಒಗ್ಗೂಡುವ ಅಗತ್ಯವಿದೆ : ಮಲ್ಲಿಕಾರ್ಜುನ ಖರ್ಗೆ

Spread the love

ಬೆಂಗಳೂರು, ಸೆ.9- ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂಬ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ. ಅವರು ಸಮಯ ತೆಗೆದುಕೊಂಡಿದ್ದಾರೆ. ಮುಂದೆನಾಗುತ್ತೆ ಎಂದು ಕಾದು ನೋಡುತ್ತೇವೆ ಎಂದು ರಾಜ್ಯಸಭೆಯ ವಿರೋಧದ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ 27 ಸ್ಥಾನ ಗೆದ್ದಿದೆ, ಜನ ಬೆಂಬಲ ನಮ್ಮ ಪಕ್ಷಕ್ಕಿದೆ. 23 ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯಲು ಬೇರೆ ಮಾರ್ಗ ಅನುಸರಿಸುತ್ತಿದ್ದಾರೆ. ತಾವು ಖುದ್ಧಾಗಿ ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ಮಾಡಿ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಜನಾಭಿಪ್ರಾಯದ ಪ್ರಕಾರ ಅಧಿಕಾರ ಹಿಡಿಯಲು ಕಾಂಗ್ರೆಸ್‍ಗೆ ಅವಕಾಶ ಇದೆ. ಬಿಜೆಪಿಯ ಮೇಯರ್ ಆಗಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಜೆಡಿಎಸ್ ನಾಯಕರನ್ನು ಕೇಳಬೇಕಿತ್ತು, ಕೇಳಿದ್ದೇವೆ. ಮುಂದೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ ಎಂದು ಹೇಳಿದರು.

ಜನ ಬಿಜೆಪಿಗೆ ವಿರುದ್ಧವಾಗಿ ಮತ ಹಾಕಿದ್ದಾರೆ. ಬಿಜೆಪಿಯೇತರ ಅಭ್ಯರ್ಥಿಗಳು ಹೆಚ್ಚು ಗೆದ್ದಿದ್ದಾರೆ. ಜಾತ್ಯತೀತ ಪಕ್ಷಗಳು ಒಗ್ಗೂಡಿದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಹಿಡಬಹುದು. ರಾಷ್ಟ್ರ ರಾಜಕಾರಣದಲ್ಲೂ ಜಾತ್ಯತೀತ ಪಕ್ಷಗಳು ಸೈದ್ಧಾಂತಿಕ ಆಧಾರದ ಮೇಲೆ ಒಗ್ಗೂಡಿದ್ದೇವೆ. ನಮ್ಮಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡಬೇಡಿ. ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಜಾತ್ಯತೀತ ನಿಲುವಿಗೆ ಬದ್ಧವಾಗಿ ಡಿಎಂಕೆ ಸೇರಿ ವಿವಿಧ ಪಕ್ಷಗಳ ಜೊತೆ ಕೈಜೊಡಿಸಿದ್ದೇವೆ ಎಂದರು.

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬಗ್ಗೆ ನಾವು ಬಹಳಷ್ಟು ಬಾರಿ ಮಾತನಾಡಿದ್ದೇವೆ. ಆದರೆ ನಮ್ಮ ಮಾತುಗಳನ್ನು ಯಾರು ಪ್ರಚಾರ ಮಾಡುವುದಿಲ್ಲ. ಮಾಧ್ಯಮಗಳನ್ನು ಯಾರು ಹೆದರಿಸುತ್ತಿದ್ದಾರೆ ಎಂದು ಗೋತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೇ ಹೆದರಿಸುತ್ತಿದ್ದಾರಾ ಗೋತ್ತಿಲ್ಲ. ಕಾಂಗ್ರೆಸ್ ಬೆಲೆ ಏರಿಕೆ ವಿರುದ್ಧ ಸಂಸತ್‍ನಲ್ಲಿ ಚರ್ಚೆ ಮಾಡಿದೆ, ಸೈಕಲ್ ರ್ಯಾಲಿ ಸೇರಿ ಹಲವಾರು ಪ್ರತಿಭಟನೆಗಳಾಗಿವೆ. ಆದರೆ ಯಾವುದಕ್ಕೂ ಪ್ರಚಾರ ಸಿಕ್ಕಿಲ್ಲ. ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಸಲು ಅಧಿವೇಶನ ನಡೆಯುವ ವೇಳೆ ನಾವು 15 ಸಭೆಗಳನ್ನು ನಡೆಸಿದ್ದೇವೆ. ಇನ್ನೇನು ಮಾಡಲು ಸಾಧ್ಯ ಎಂದು ಖರ್ಗೆ ಪ್ರಶ್ನಿಸಿದರು.