BIG NEWS : ರಾಜ್ಯಸಭೆ ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ

Social Share

ನವದೆಹಲಿ,ಅ.1-ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿವಿರ್ ನಿರ್ಣಯದಂತೆ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ನಿಯಮದ ಅನುಸಾರ ಖರ್ಗೆ ಅವರು ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಖರ್ಗೆ ಅವರಿಂದ ತೆರವಾದ ವಿಪಕ್ಷ ನಾಯಕ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಆಕಾಂಕ್ಷಿಗಳಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಜೊತೆ ಕೇಂದ್ರ ಮಾಜಿ ಸಚಿವ ಶಶಿ ತರೂರ್, ಜಾರ್ಖಂಡ್‍ನ ಕಾಂಗ್ರೆಸ್ ನಾಯಕ ಕೆ.ಎನ್.ತ್ರಿಪಾಠಿ ನಾಮಪತ್ರ ಸಲ್ಲಿಸಿದ್ದಾರೆ. ಅ.8ರವರೆಗೂ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಶಶಿ ತರೂರ್ ಅವರು ಯಾವುದೇ ಒತ್ತಡಕ್ಕೆ ಮಣಿದು ನಾಮಪತ್ರ ಹಿಂಪಡೆಯುವುದಿಲ್ಲ. ಸ್ಪರ್ಧಾ ಕಣದಲ್ಲಿ ಮುಂದುವರೆಯುತ್ತೇವೆ ಎಂದು ಘೋಷಿಸಿದ್ದಾರೆ.

ಹೀಗಾಗಿ ಚುನಾವಣೆ ನಡೆಯಲಿದೆಯೇ ಅಥವಾ ಅವಿರೋಧ ಆಯ್ಕೆಯೇ ಎಂಬ ಕುತೂಹಲ ದಟ್ಟವಾಗಿದೆ. ಒಂದು ವೇಳೆ ನಾಮಪತ್ರ ಹಿಂಪಡೆಯದೆ ಇದ್ದರೆ ಅ.17ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಖರ್ಗೆ ಅವರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಲವು ರಾಜ್ಯಗಳು ಖರ್ಗೆ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ ನಿರ್ಣಯ ಕೈಗೊಂಡು ಚುನಾವಣಾಧಿಕಾರಿ ಆಗಿರುವ ಮಧುಸೂದನ್ ಮಿಸ್ತ್ರಿ ಅವರ ಕಚೇರಿಗೆ ರವಾನೆ ಮಾಡುತ್ತಿವೆ.

ಸೋನಿಯಾ ಗಾಂಧಿ ಹಾಗೂ ಅವರ ಕುಟುಂಬದ ಸದಸ್ಯರು ಮಲ್ಲಿಕಾರ್ಜುನ ಖರ್ಗೆ ಅವರನ್ನೆ ಬೆಂಬಲಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ಅಲ್ಲಗೆಳೆದಿರುವ ಶಶಿ ತರೂರ್, ಗಾಂಧಿ ಕುಟುಂಬ ಯಾರನ್ನೂ ಬೆಂಬಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಅಧ್ಯಕ್ಷರ ಆಯ್ಕೆ ದಿನೇ ದಿನೇ ರಂಗೇರುತ್ತಿದೆ. ಶಶಿ ತರೂರ್ ಅವರಿಗೆ ಭಾಷಾ ಪ್ರಾವೀಣ್ಯತೆ ಪ್ರಬಲ ಅಡ್ಡಿಯಾಗುವ ಸಾಧ್ಯತೆ ಇದೆ. ಹಿಂದಿ ಭಾಷಾ ಪ್ರಾಂತ್ಯಗಳು ತರೂರ್ ಅವರನ್ನು ವಿರೋಧಿಸುತ್ತಿವೆ ಎಂಬ ವದಂತಿಗಳಿವೆ.

ಆದರೆ ಇದನ್ನು ಅಲ್ಲಗೆಳೆದಿರುವ ತರೂರ್ ತಮಗೆ ಇಂಗ್ಲೀಷ್ ಮೇಲಿರುವಷ್ಟೇ ಹಿಡಿತ ಹಿಂದಿಯ ಮೇಲೂ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಖುದ್ದು ಅವರ ತವರು ರಾಜ್ಯ ಕೇರಳದಲ್ಲೇ ಬೆಂಬಲ ಇಲ್ಲದಿರುವುದು ಕಂಡುಬರುತ್ತಿದೆ.

ಭಾರತ ಐಕ್ಯತಾ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂ 18 ದಿನಗಳ ಕಾಲ ಕೇರಳದಲ್ಲಿ ಸಂಚರಿಸಿದರೂ ಶಶಿ ತರೂರ್ ಅಲ್ಲಿ ಕಾಣಿಸಿಕೊಳ್ಳಲಿಲ್ಲ. ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಬಹುತೇಕ ಖರ್ಗೆ ಅವರ ಆಯ್ಕೆ ನಿಚ್ಚಳವಾಗಿದೆ ಎಂಬ ಅಭಿಪ್ರಾಯಗಳಿವೆ.

Articles You Might Like

Share This Article