ಬೆಂಗಳೂರು,ಫೆ.23- ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಮಾಲೀಕರು ಮನೆ ತೋರಿಸಲು ಒಳಗೆ ಹೋಗುತ್ತಿದ್ದಂತೆ ರೂಮ್ ಚಿಲಕ ಹಾಕಿ ಅವರ ಮೈಮೇಲಿದ್ದ ಆಭರಣಗಳನ್ನು ಕಿತ್ತುಒಂಡು ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನ ಕಿರಣ್‍ಕುಮಾರ್(36) ಬಂಧಿತ ಆರೋಪಿ.
ನಗರದ ಬಾಲಾಜಿಲೇಔಟ್‍ನಲ್ಲಿ ವಾಸವಾಗಿದ್ದ ಕಿರಣ್‍ಕುಮಾರ್ ವಿರುದ್ಧ ಈ ಹಿಂದೆ ರಾಜಗೋಪಾಲನಗರ ಹಾಗೂ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಜ್ಞಾನಭಾರತಿಯ ಸರ್‍ಎಂವಿ ಲೇಔಟ್‍ನಲ್ಲಿ ಮನೆ ಖಾಲಿಯಿದೆ ಎಂಬ ಬೋರ್ಡ್ ಹಾಕಿದ್ದನ್ನು ಆರೋಪಿ ಗಮನಿಸಿದ್ದಾನೆ.
ಫೆ.7ರಂದು ಬೆಳಗ್ಗೆ 10.30ರಲ್ಲಿ ಬಾಡಿಗೆಗೆ ಮನೆ ಬೇಕೆಂದು ಬಂದ ಅಪರಿಚಿತ ವ್ಯಕ್ತಿಗೆ ಮನೆ ತೋರಿಸಲು ಮಾಲೀಕರಾದ 70 ವರ್ಷ ವೃದ್ಧೆ ಖಾಲಿಯಿದ್ದ ಮೊದಲನೆ ಮಹಡಿಯ ಮನೆಯೊಳಗೆ ಹೋಗಿದ್ದಾರೆ. ಆ ವೇಳೆ ರೂಮ್ ಬಾಗಿಲನ್ನು ಹಾಕಿ ವೃದ್ಧೆಯನ್ನು ತಳ್ಳಿ ಕೆಳಗೆ ಬೀಳಿಸಿ ಗಾಯಗೊಳಿಸಿ ಮೈಮೇಲಿದ್ದ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಮಾಲೀಕರು ದೂರು ನೀಡಿದ್ದರು. ಇನ್‍ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಯು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಚಿನ್ನದ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾಗಿ ತಿಳಿಸಿದ ಮೇರೆಗೆ ಆರೋಪಿಯಿಂದ 9 ಲಕ್ಷ ರೂ. ಬೆಲೆಯ 220 ಗ್ರಾಂ ತೂಕದ ಚಿನ್ನದ ಆಭರಣ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
