ಶೀಲ ಶಂಕಿಸಿ ಪತ್ನಿ ಕೊಂದಿದ್ದ ಪತಿ ಸೆರೆ

ಬೆಂಗಳೂರು, ಏ.21- ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿಪುರ 13ನೆ ಕ್ರಾಸ್, ರಾಮಮಂದಿರ ರಸ್ತೆ ನಿವಾಸಿ ವನಜಾಕ್ಷಿ(31) ಕೊಲೆಯಾದ ಮಹಿಳೆ. ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದ ವನಜಾಕ್ಷಿ ಕಾರು ಚಾಲನಾ ವೃತ್ತಿ ಮಾಡುತ್ತಿರುವ ಅಶೋಕ್ ಎಂಬಾತ ನನ್ನು ಮದುವೆಯಾಗಿದ್ದು,
ದಂಪತಿಗೆ ಮೂವರು ಮಕ್ಕಳಿದ್ದಾರೆ.

ಅಶೋಕನ ಊರಾದ ಹುಲಿಯೂರು ದುರ್ಗ ಹೋಬಳಿ ಕೆಂಚೇನಹಳ್ಳಿಯ ತಾತನ ಮನೆಗೆ ಮಕ್ಕಳು ಹೋಗಿದ್ದಾರೆ. ಕಳೆದ ಭಾನುವಾರ ಅಶೋಕ್ ಮನೆಗೆ ಬಂದಾಗ ವನಜಾಕ್ಷಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದರು. ಆ ವೇಳೆ ಅದನ್ನು ಪ್ರಶ್ನಿಸಿದ ಪತಿ ಯಾರ ಜೊತೆಗೆ ಮಾತನಾಡುತ್ತಿದ್ದೀಯ ಎಂದು ಜಗಳವಾಡಿದ್ದಾನೆ. ಪತ್ನಿಯ ಶೀಲ ಶಂಕಿಸಿ ಈ ಹಿಂದೆಯೂ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ವಿಚಾರವಾಗಿ ಜಗಳವಾಡಿದ್ದಾನೆ.

ಭಾನುವಾರ ರಾತ್ರಿ ಮತ್ತೆ ಅದೇ ವಿಚಾರವಾಗಿ ಪತ್ನಿಯೊಂದಿಗೆ ಜಗಳವಾಡಿದ ಅಶೋಕ್ ಕೋಪದಲ್ಲಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ. ವನಜಾಕ್ಷಿ ಅವರ ಸಹೋದರ ಭಾನುವಾರ ರಾತ್ರಿ ಫೋನ್ ಮಾಡಿದರೂ ತೆಗೆದಿಲ್ಲ. ಸೋಮವಾರ ಮತ್ತೆ ಅಕ್ಕನಿಗೆ ಮೊಬೈಲ್ ಮಾಡಿದ್ದಾರೆ. ಕರೆ ಸ್ವೀಕರಿಸದಿದ್ದಾಗ ಅನುಮಾನಗೊಂಡು ನಿನ್ನೆ ರಾತ್ರಿಮನೆ ಬಳಿ ಬಂದು ನೋಡಿದಾಗ ಬೀಗ ಹಾಕಿರುವುದು ಕಂಡುಬಂದಿದೆ.

ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಅನುಮಾನಗೊಂಡು ತಕ್ಷಣ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ, ಮನೆ ಬಾಗಿಲು ಒಡೆದು ನೋಡಿದಾಗ ವನಜಾಕ್ಷಿ ಕೊಲೆಯಾಗಿರುವುದು ಕಂಡು ಬಂದಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಂಧನ: ಇನ್ಸ್‍ಪೆಕ್ಟರ್ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿ ಅಶೋಕನ ಮೊಬೈಲ್ ಟವರ್ ಆಧರಿಸಿ ಮಾಹಿತಿ ಸಂಗ್ರಹಿಸಿ ಆತನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.