ಬೆಂಗಳೂರು,ಸೆ.13-ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಹಾಡಹಗಲೇ ಗುಜರಿ ವ್ಯಾಪಾರಿ ಮೇಲೆ ಲಾಂಗ್‍ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ನಡೆದಿದೆ. ವಿವಿ ಗಿರಿ ಬಡಾವಣೆಯ ನಿವಾಸಿ ಗಣೇಶ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಣೇಶ ಅವರು ಗಾಂಧಿ ನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ತಮ್ಮ ಮಗನನ್ನು ಶಾಲೆಗೆ ಬಿಟ್ಟು ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ನಟರಾಜ ಚಿತ್ರಮಂದಿರದ ಪಕ್ಕದ ರಸ್ತೆಯಲ್ಲಿ ಆಟೋದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಬೈಕ್ ಅಡ್ಡಗಟ್ಟಿ ಏಕಾಏಕಿ ಲಾಂಗ್‍ಗಳಿಂದ ಗಣೇಶನ ತಲೆ, ಕೈಕಾಲಿಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಣೇಶನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಶೇಷಾದ್ರಿ ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಟೀವಿಗಳ ಫುಟೇಜ್‍ಗಳನ್ನು ಪೊಲೀಸರು ವಶಕ್ಕೆ ಪಡೆದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
2020ರಲ್ಲಿ ಗಣೇಶ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ವಿಚಾರಕ್ಕೆ ಕಿನೋ ಚಿತ್ರಮಂದಿರ ಬಳಿ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಈ ವಿಚಾರವಾಗಿ ಹಳೇ ವೈಷಮ್ಯದಿಂದಾಗಿ ಇಂದು ಬೆಳಗ್ಗೆ ಹಲ್ಲೆ ನಡೆಸಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.