ಬೆಂಕಿ ಹಚ್ಚಿಕೊಂಡು ವ್ಯಕ್ತಿ ಸಾವು, ಜೀವ ಉಳಿಸಲು ಮುಂದಾದ ಪೊಲೀಸರಿಗೆ ಗಾಯ

Spread the love

ತುಮಕೂರು, ಮೇ 20- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡ ಮನೆ ಮಾಲೀಕ ಮೃತಪಟ್ಟಿದ್ದು, ಬೆಂಕಿ ನಂದಿಸಲು ಮುಂದಾದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ ಘಟನೆ ಕೋರಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ಸೋರೆಕುಂಟೆ ಬಳಿಯ ಶ್ರೀನಿ ವೈನ್ಸ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಗೋವಿಂದರಾಜು ಮೃತಪಟ್ಟ ಮನೆ ಮಾಲೀಕ.
ಪೊಲೀಸ್ ಸಹಾಯವಾಣಿ 112ಗೆ ಬಂದ ಕರೆಯನ್ನು ಆಧರಿಸಿ, ಕೋರಾ ಠಾಣೆ ವ್ಯಾಪ್ತಿಯ ಲಿಂಗನಹಳ್ಳಿ ಬಳಿಗೆ ಹೋದ ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ಗುರುರಂಗಪ್ಪ ಮತ್ತು ಗವಿರಂಗಯ್ಯ ಅವರು ಬೆಂಕಿಯನ್ನು ಆರಿಸಲು ಹೋಗಿ ಶೇ.30ರಷ್ಟು ಗಾಯಗೊಂಡಿದ್ದಾರೆ.

ಪ್ರಕರಣದ ವಿವರ: ತಾಲ್ಲೂಕಿನ ಸೋರೆಕುಂಟೆ ಬಳಿಯ ಶ್ರೀನಿ ವೈನ್ಸ್‍ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಗೋವಿಂದರಾಜು ಅವರನ್ನು ಇತ್ತೀಚೆಗೆ ಕೆಲಸದಿಂದ ತೆಗೆದು ಹಾಕಲಾಗಿದ್ದು, ಇದರಿಂದ ಮನೆಯಲ್ಲಿ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ.  ಕೆಲಸದಿಂದ ತೆಗೆದು ಹಾಕಿದ ನಂತರ ಗೋವಿಂದರಾಜು ಮನೆಯಲ್ಲಿದ್ದ ವೃದ್ಧ ತಂದೆ-ತಾಯಿಯೊಂದಿಗೆ ಜಗಳವಾಡುತ್ತಿದ್ದು, ಹಲ್ಲೇ ನಡೆಸುತ್ತಿದ್ದ ಎನ್ನಲಾಗಿದ್ದು, ಅಕ್ಕ-ಪಕ್ಕದವರು ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗೋವಿಂದರಾಜುಗೆ ಬೈದು, ಬುದ್ಧಿ ಹೇಳಿದ್ದಾರೆ. ಪೊಲೀಸರು ಆಗಮಿಸಿದ ನಂತರ ಅವರ ಮುಂದೆಯೇ ಎಣ್ಣೆ ಮತ್ತಿನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಹಚ್ಚಿಕೊಂಡ ಗೋವಿಂದರಾಜು ಅವರನ್ನು ಕಾಪಾಡಲು ಹೋದ ಕಾನ್‍ಸ್ಟೆಬಲ್‍ಗಳಾದ ಗುರುರಂಗಪ್ಪ ಮತ್ತು ಗವಿ ರಂಗಯ್ಯ ಅವರ ಮುಖ ಮತ್ತು ತಲೆಗೆ ಬೆಂಕಿ ತಗುಲಿದ್ದು ಶೇ.30ರಷ್ಟು ಸುಟ್ಟಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಗೋವಿಂದರಾಜು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಜಿಲ್ಲಾಸ್ಪತ್ರೆಗೆ ಎಸ್ಪಿ ರಾಹುಲ್ ಕುಮಾರ ಶಹಪೂರವಾಡ, ಎಎಸ್ಪಿ ಟಿ.ಜೆ.ಉದೇಶ್, ಕೆಎಸ್‍ಆರ್‍ಪಿ ಡಿವೈಎಸ್ಪಿ ಪರಮೇಶ್, ನಗರ ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲಿಸಿದರು.

Facebook Comments