ಬಸ್ ನಿಲ್ದಾಣದಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ದುರ್ಮರಣ

Spread the love

ಬೆಂಗಳೂರು, ಮೇ 15- ಬಸ್ ನಿಲ್ದಾಣದಲ್ಲಿದ್ದ ವ್ಯಕ್ತಿಗೆ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಈ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆತ ಸುಮಾರು 25 ರಿಂದ 30 ವರ್ಷದವನು ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ಬಸ್‍ಗಾಗಿ ಕಾಯುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ರಾತ್ರಿ ಮಳೆ ಬರುತ್ತಿದ್ದ ವೇಳೆ ಬಸ್ ನಿಲ್ದಾಣದಲ್ಲಿ ನಾಲ್ವರು ಕುಳಿತಿದ್ದರು. ಈ ವೇಳೆ ಅವರಿಗೆ ಕರೆಂಟ್ ಶಾಕ್ ಹೊಡೆದ ಅನುಭವ ವಾಗಿದೆ.

ಕೂಡಲೇ ಮೂವರು ಬಸ್ ಶೆಲ್ಟರ್‍ನಿಂದ ಎದ್ದು ಹೊರ ಓಡಿದ್ದಾರೆ. ಮೃತ ವ್ಯಕ್ತಿ ಚಪ್ಪಲಿ ಕೆಳಗೆ ಬಿಟ್ಟು ಪ್ರಯಾಣಿಕರಿಗಾಗಿ ಹಾಕಿದ್ದ ಸೀಟ್ ಮೇಲೆ ಕುಳಿತಿದ್ದ. ಕೂಡಲೆ ಕೆಳಗಿಳಿದು ಓಡುವ ರಭಸದಲ್ಲಿ ಬಸ್ ಶೆಲ್ಟರ್‍ನ ಬೋರ್ಡ್ ತಗುಲಿದೆ. ಆಗ ವಿದ್ಯುತ್ ಶಾಕ್ ಹೊಡೆದು, ಅಲ್ಲೇ ಕುಸಿದು ಬಿದ್ದಿದ್ದಾನೆ.

ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಅಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಮಾರ್ಗಮಧ್ಯೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಪೊಲೀಸರು ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಹೆಬ್ಬಾಳ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments