ಭಯೋತ್ಪಾದಕ ದಾಳಿಯ ಹುಸಿ ಕರೆ ಮಾಡಿದ್ದವನ ಬಂಧನ

Social Share

ಭೂಪಾಲ್,ಜ.10- ಮುಂಬೈನ ವಿವಿಧೆಡೆ ಭಯೋತ್ಪಾದಕ ದಾಳಿಗಳು ನಡೆಯಲಿದೆ ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಜಿತೇಶ್ ಠಾಕೂರ್ ಹುಸಿ ಕರೆ ಮಾಡಿದ ವ್ಯಕ್ತಿ. ನಿರುದ್ಯೋಗಿ ಹಾಗೂ ಮದ್ಯವ್ಯಸನಿಯಾಗಿರುವ ಈತ ಕಳೆದ ಜ.6ರಂದು ಮುಂಬೈ ಪೊಲೀಸ್ ಕಂಟ್ರೋಲ್‍ರೂಮ್‍ಗೆ ಕರೆ ಮಾಡಿ, ತಾನು ಸೈನ್ಯದಿಂದ ಕರೆ ಮಾಡುತ್ತಿದ್ದು, ಮುಂಬೈನಲ್ಲಿ ನ್ಯೂಕ್ಲಿಯಾರ್ ದಾಳಿ ನಡೆಯುವ ಸಾಧ್ಯತೆ ಇದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(ಸಿಎಸ್‍ಎಂಟಿ), ಕುರ್ಲಾ ರೈಲ್ವೆ ನಿಲ್ದಾಣ, ಬಾಲಿವುಡ್ ನಟ ಶಾರುಖ್ ಖಾನ್ ಬಂಗಲೆ ಹಾಗೂ ಕರಘರ್‍ನ ಗುರುದ್ವಾರದ ಬಳಿ ದಾಳಿ ನಡೆಯಲಿದೆ ಎಂದು ಹೇಳಿದ್ದ.
ಇದೀಗ ಆರೋಪಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ಈ ವ್ಯಕ್ತಿ ಈ ಹಿಂದೆಯೂ ಸುಳ್ಳು ಕರೆಗಳನ್ನು ಮಾಡಿದ್ದ ಮತ್ತು ಪೊಲೀಸ್ ಎಸ್‍ಒಎಸ್ ಸೇವೆಯಾದ ಡಯಲ್ 100ರ ಸಿಬ್ಬಂದಿಯೊಂದಿಗೆ ಹಲವಾರು ಸಂದರ್ಭಗಳಲ್ಲಿ ಜಗಳವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಸಾರ್ವಜನಿಕ ಸೇವಕರಿಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಸಂಜೀವನಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Articles You Might Like

Share This Article