ಬಾಳೆಗೊನೆ ಕದ್ದನೆಂದು ಮಾರಣಾಂತಿಕ ಹಲ್ಲೆ : ಯುವಕ ಸಾವು

Social Share

ತುಮಕೂರು/ಮಧುಗಿರಿ, ಅ.18- ಬಾಳೆಗೊನೆ ಕದ್ದನೆಂಬ ಸುಳ್ಳು ಆರೋಪ ಹೊರಿಸಿ ಯುವಕನಿಗೆ ಮಾರಾಣಾಂತಿಕವಾಗಿ ಥಳಿಸಿದ್ದರಿಂದ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟದ್ದಾನೆ.
ಮಧುಗಿರಿ ತಾಲೂಕು ಐಡಿಹಳ್ಳಿ ಹೋಬಳಿಯ ಐಡಿಹಳ್ಳಿ ಗ್ರಾಮದ ಪುರುಷೋತ್ತಮ್ (35)ಮೃತ ಯುವಕ.

ಕಳೆದ 15 ದಿನಗಳ ಹಿಂದೆ ಬಾಲಜಿ ರೆಡ್ಡಿ ಅವರ ಬಾಳೆ ತೋಟದಲ್ಲಿ ಬಾಳೆ ಗೊನೆ ಕದ್ದಿದ್ದಾನೆ ಎಂದು ಆರೋಪಿಸಿ ಪುರುಷೋತ್ತಮ್‍ಗೆ ಮಾರಣಾಂತಿಕ ಹಲ್ಲೆ ನಡೆಸಿ ನಂತರ ಕೊಡಿಗೇನಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.

ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದು ಮನೆಗೆ ಮರಳಿದ ಯುವಕ ತನ್ನ ದೇಹದಲ್ಲಿ ನೋವಿದ್ದರೂ ಭಯದಿಂದ ಮನೆಯವರಿಗೂ ಹೇಳದೆ ನೋವು ನುಂಗಿಕೊಂಡು ಅ. 15ರವರೆಗೆ ಇದ್ದು, ನೋವು ಹೆಚ್ಚಾದ ಪರಿಣಾಮ ಮಧುಗಿರಿ ಸರಕಾರಿ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಪರಿಸ್ಥಿತಿ ಗಂಭೀರವಾಗಿದ್ದರಿಂದ ತುಮಕೂರಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು.

ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪುರುಷೋತ್ತಮ್ ಮೃತಪಟ್ಟಿದ್ದಾನೆ. ನನ್ನ ಮಗನ ಸಾವಿಗೆ ತೋಟದ ಮಾಲೀಕ ಬಾಲಾಜಿ ರೆಡ್ಡಿ ಹಾಗೂ ಅವರ ಸಂಗಡಿಗರೇ ಕಾರಣ ಎಂದು ಆರೋಪಿಸಿ ಪುರುಷೋತಮ್ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ರಾಹುಲ್‍ಕುಮಾರ್ ಶಹಪುರ್‍ವಾಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article