ಹೊಸದುರ್ಗ ತಾಲ್ಲೂಕಿನಲ್ಲಿ ಕರಡಿ ದಾಳಿಗೆ ವ್ಯಕ್ತಿ ಬಲಿ

Spread the love

ಚಿತ್ರದುರ್ಗ,ಸೆ.14- ಆಹಾರ ಅರಸಿ ನಾಡಿಗೆ ಬಂದ ಕರಡಿ ನಾಲ್ಕು ಜನರ ಮೇಲೆ ದಾಳಿ ಮಾಡಿದ್ದು, ಅದರಲ್ಲಿ ಒಬ್ಬ ಮೃತಪಟ್ಟಿರುವ ಘಟನೆ ಹೊಸದುರ್ಗ ತಾಲ್ಲೂಕಿನ ದಳವಾಯಿಕಟ್ಟೆ ಗ್ರಾಮದಲ್ಲಿ ನಡೆದಿದೆ.  ತಾಲ್ಲೂಕಿನ ಬೊಕ್ಕಸಾಗರ ಗ್ರಾಮದ ರಾಜಪ್ಪ (45) ಮೃತಪಟ್ಟ ದುರ್ದೈವಿ.

ಘಟನೆ ವಿವರ: ನಿನ್ನೆ ಮಧ್ಯಾಹ್ನ ದಳವಾಯಿ ಕಟ್ಟೆ ಗ್ರಾಮದ ಮನೆ ಮುಂದೆ ನಾಲ್ಕೈದು ಮಂದಿ ಮಾತನಾಡುತ್ತಾ ಕುಳಿತಿದ್ದರು. ಈ ಸಂದರ್ಭದಲ್ಲಿ ಅರಣ್ಯದಿಂದ ಏಕಾಏಕಿ ಗ್ರಾಮಕ್ಕೆ ಬಂದ ಕರಡಿ ಇವರತ್ತ ನುಗ್ಗಿ ದಾಳಿ ಮಾಡಿದೆ.  ರಮೇಶ, ಉಮೇಶ, ಶಶಿ, ತಿಪ್ಪೇಸ್ವಾಮಿ, ರಾಜಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನು ಹೊಸದುರ್ಗದ ಶ್ರೀರಾಮಪುರ ಸಕ್ಕರೆ ಆಸ್ಪತ್ರೆಗೆ ದಾಖಲಿಸಲಾಯಿತು.

ಇವರಲ್ಲಿ ರಾಜಪ್ಪನ ಸ್ಥಿತಿ ಗಂಭೀರವಾಗಿದ್ದುದ್ದರಿಂದ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಶಿವಮೊಗ್ಗ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗದ ಕಾರಣ ಬೆಂಗಳೂರಿಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದರು.  ತಡರಾತ್ರಿ ಬೆಂಗಳೂರಿಗೆ ರಾಜಪ್ಪನನ್ನು ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ. ಯಾವುದೋ ಕಾರ್ಯ ನಿಮಿತ್ತ ರಾಜಪ್ಪ ದಳವಾಯಿಕಟ್ಟೆಗೆ ಬಂದು ಕರಡಿಗೆ ಬಲಿಯಾಗಿರುವುದು ದುರಂತವೇ ಸರಿ.ಶ್ರೀರಾಮಪುರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಕ್ರೋಶ: ಹೊಸದುರ್ಗ ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಪದೇ ಪದೇ ಕರಡಿ ದಾಳಿ ನಡೆಯುತ್ತಲೇ ಇದೆ. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಸಾವುನೋವು ಸಂಭವಿಸುತ್ತಲೇ ಇದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕರಡಿ ಹಾವಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದ್ದಾರೆ.  ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಗಾಯಾಳುಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.

Facebook Comments