ಮಂಡ್ಯ,ನ.2- ಆಟವಾಡುವಾಗ ಕಾಲುಜಾರಿ ನಾಲ್ವರು ಬಾಲಕಿಯರು ನಾಲೆಗೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಾವೇರಿ ಪಟ್ಟಣದ ರಾಮಸ್ವಾಮಿ ನಾಲೆಯಲ್ಲಿ ನಡೆದಿದೆ. ಮೈಸೂರಿನ ಶಾಂತಿನಗರದ ಮದರಸದಿಂದ 15 ಮಕ್ಕಳು ಹಾಗೂ ಮೂವರು ಸಿಬ್ಬಂದಿ ಇಲ್ಲಿಗೆ ಬಂದಿದ್ದಾಗ ಈ ದುರಂತ ಸಂಭವಿಸಿದೆ.
ಮೃತರನ್ನು ಆಯಿಷಾ (14), ಹನಿ (14), ಥರ್ಬಿಮ್ (13), ಆಫ್ರಿನ್ (13)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಬಾಲಕಿಯೊಬ್ಬಳು ನಾಲೆಯ ನೀರಿನಲ್ಲಿ ಆಟವಾಡುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಇನ್ನು ಆರು ಮಂದಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಮದರಸಾ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ನಾಲ್ವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಯಿಷಾಳನ್ನು ನೀರಿನಿಂದ ಮೇಲೆತ್ತಿ ಆಕೆಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಕೊನೆಯುಸಿರೆಳೆದಿದ್ದಾಳೆ.
ಇನ್ನು ಸತತ ಪ್ರಯತ್ನದ ನಡುವೆ ಇಂದು ಬೆಳಗ್ಗೆ ಹನಿ, ಥರ್ಬಿಮ್, ಆಫ್ರಿನ್ ಮೃತದೇಹಗಳು ಪತ್ತೆಯಾಗಿದ್ದು, ನಾಲೆಯ ನೀರನ್ನು ನಿಲ್ಲಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಸುಮಾರು ಆರು ತಾಸುಗಳ ಕಾರ್ಯಾಚರಣೆ ನಡೆಸಿದ ನಂತರ ಹನಿ ಮತ್ತು ಥರ್ಬಿಮ್ ಮೃತದೇಹಗಳು ಸಿಕ್ಕಿವೆ.
ನಿನ್ನೆ ಮಧ್ಯಾಹ್ನ ಬೀರೇದೇವರ ದೇವಸ್ಥಾನ ಬಳಿ ಮದರಸಾದ ಮಕ್ಕಳು ಬಂದಿದ್ದರು. ನೀರಿನ ರಭಸವಿದ್ದರೂ ಅದನ್ನು ಯಾರು ಗಮನಿಸಿಲ್ಲ. ಇವರ ಮೇಲ್ವಿಚಾರಣೆಗೆ ಬಂದಿದ್ದ ಸಿಬ್ಬಂದಿಗಳನ್ನು ಮಕ್ಕಳನ್ನು ನಾಲೆ ಬಳಿ ಏಕೆ ಬಿಟ್ಟರು ಎಂಬುದು ತಿಳಿಯುತ್ತಿಲ್ಲ.
ರಾತ್ರಿ 9 ಗಂಟೆವರೆಗೂ ಪ್ರಯಾಸಪಟ್ಟು ಹುಡುಕಾಟ ನಡೆಸಲಾಗಿತ್ತು. ಕತ್ತಲಾದ ಕಾರಣ ಶೋಧ ಕಾರ್ಯಚರಣೆ ನಿಲ್ಲಿಸಿ ಇಂದು ಮತ್ತೆ ಈಜು ತಜ್ಞರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನಪಟ್ಟು ಮಕ್ಕಳ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಅರಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸ್ನೇಹಿತೆಯರನ್ನು ಕಳೆದುಕೊಂಡ ಸಹಪಾಠಿಗಳು ನಾಲೆ ಬಳಿ ಕಣ್ಣೀರು ಹಾಕಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.
