ಮಂಡ್ಯ ಉಸ್ತುವಾರಿ ಬದಲಾಯಿಸಿದ್ದೇಕೆ? ಬಿಜೆಪಿಯಲ್ಲೇ ಗಂಭೀರ ಚರ್ಚೆ

Social Share

ಬೆಂಗಳೂರು,ಜ.27- ಕಾಂಗ್ರೆಸ್ ಮತ್ತು ಜೆಡಿಎಸ್‍ನ ಭದ್ರಕೋಟೆ ಎನಿಸಿದ ಸಕ್ಕರೆನಾಡು ಮಂಡ್ಯದಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರನ್ನು ಬದಲಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಗೋಪಾಲಯ್ಯ ಅವರನ್ನು ಬದಲಾಯಿಸಿ ಮಂಡ್ಯ ಉಸ್ತುವಾರಿಯನ್ನು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ನೀಡಿರುವುದಕ್ಕೆ ಸ್ವಪಕ್ಷದವರೇ ಬಹಿರಂಗವಾಗಿ ವಿರೋಧಿಸಿರುವುದು ಮಂಡ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಜಗಜ್ಜಾಹೀರವಾಗಿದೆ.

ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಅವರು ಆರ್. ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನಿಯೋಜನೆ ಮಾಡಿರುವುದಕ್ಕೆ ಬಹಿರಂಗವಾಗಿಯೇ ವಿರೋಧಿಸಿ ಗೋ ಬ್ಯಾಕ್ ಅಶೋಕ್ ಎಂಬ ಪೋಸ್ಟರ್ ಅಂಟಿಸಿದ್ದಾರೆ.

ಇದು ಅಶೋಕ್ ಮತ್ತು ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ್ದು, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂಬ ಬಿಜೆಪಿ ಲೆಕ್ಕಾಚಾರಕ್ಕೆ ಮೊದಲ ಹಿನ್ನಡೆ ಎಂದು ಅಸಮಧಾನ ಹೊರಹಾಕಿದ್ದಾರೆ.

ಪರೀಕ್ಷಾ ಪೇ ಚರ್ಚಾ: ಯುವಕರಿಗೆ ಒತ್ತಡ ಮುಕ್ತ ವಾತಾವರಣ ಸೃಷ್ಟಿಸುವ ಒಂದು ಆಂದೋಲನ

ಈ ಹಿಂದೆ 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಶೋಕ್ ಅವರಿಗೆ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ನಿಯೋಜನೆ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ನಡೆದ ಲೋಕಸಭೆಯಿಂದ ಹಿಡಿದು ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

ಗೋಪಾಲಯ್ಯ ಅವರಿಗೆ ಹಾಸನದ ಜೊತೆಗೆ ಹೆಚ್ಚುವರಿಯಾಗಿ ಮಂಡ್ಯ ಜಿಲ್ಲೆ ಉಸ್ತುವಾರಿ ನೀಡಿದ ನಂತರ ಬಿಜೆಪಿಯೊಳಗೆ ಹಲವಾರು ಬದಲಾವಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದರು. ನಾನೊಂದು ತೀರ, ನೀನೊಂದು ತೀರ ಎನ್ನುತ್ತಿದ್ದ ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇರು ಮಟ್ಟದಿಂದ ಸಂಘಟನೆಯನ್ನು ಯಶಸ್ವಿಯಾಗಿ ನಡೆಸಿದ್ದರು.

ಇದಕ್ಕೆ ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕಳೆದ ತಿಂಗಳು ಮಂಡ್ಯದಲ್ಲಿ ನಡೆದ ಬಮೂಲ್ ಡೈರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಖುದ್ದು ಅಮಿತ್ ಷಾ ಅವರು ಆಗಮಿಸಿದ್ದರು. ಪಕ್ಷ ಬೇಧ ಮರೆತು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಅನೇಕ ಮುಖಂಡರು ಆಗಮಿಸಿದ್ದರು.

ಭಾರತಕ್ಕೆ ಮತ್ತೆ ಸೌತ್ ಆಫ್ರಿಕಾದ 100 ಚೀತಾಗಳು

ಈ ಕಾರ್ಯಕ್ರಮದ ಯಶಸ್ವಿಗೆ ಗೋಪಾಲಯ್ಯ ಅವರ ಅವಿರತ್ನ ಪ್ರಯತ್ನ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾರಣವಾಯಿತು. ಸ್ವತಃ ಅಮಿತ್ ಷಾ ಅವರೇ ಪಕ್ಷದ ಕಾರ್ಯಕ್ರಮದಲ್ಲಿ ಗೋಪಾಲಯ್ಯ ಅವರ ಕಾರ್ಯ ವೈಖರಿಯನ್ನು ಹಾಡಿ ಹೊಗಳಿದ್ದರು. ಜೊತೆಗೆ ಕೆ.ಆರ್.ನಗರದಲ್ಲಿ ನಡೆದ ಜನಸಂಕಲ್ಪ ಯಾತ್ರೆಯನ್ನೂ ಅತ್ಯುತ್ತಮವಾಗಿ ನಿರ್ವಹಣೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ವಿಶೇಷವಾಗಿ ಕೆ.ಆರ್.ಪೇಟೆ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಸೇರಿದಂತೆ ಮತ್ತಿತರ ಕಡೆ ಗೋಪಾಲಯ್ಯ ಅವರು ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬೇರು ಮಟ್ಟದಿಂದ ಚುರುಕುಗೊಳಿಸಿದ್ದರು.

ಹಾಸನದ ಜೊತೆಗೆ ವಾರಕ್ಕೆ ಮೂರು ಬಾರಿ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿದ್ದ ಅವರು, ಬಿಜೆಪಿ ಕಾರ್ಯಕರ್ತರು, ಮುಖಂಡರ ವಿಶ್ವಾಸ ಗಳಿಸಿ ಪಕ್ಷ ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು ಎಂದು ಬಿಜೆಪಿಯ ಮುಖಂಡರೇ ಹೇಳುತ್ತಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಂಡ್ಯ ಉಸ್ತುವಾರಿಯಾಗಿ ಗೋಪಾಲಯ್ಯ ಅವರು ಮುಂದುವರೆದಿದ್ದರೆ ಖಂಡಿತವಾಗಿಯೂ ಪಕ್ಷದ ಸಂಘಟನೆಗೆ ಆನೆ ಬಲ ಬರುತ್ತಿತ್ತು ಎಂದು ಕಾರ್ಯಕರ್ತರೇ ಹೇಳುತ್ತಿದ್ದಾರೆ.

ಆದರೆ ಏಕಾಏಕಿ ಬದಲಾವಣೆ ಮಾಡಿರುವುದಕ್ಕೆ ಎಲ್ಲಿಯೂ ಕೂಡ ಅಸಮಾಧಾನ ತೋರ್ಪಡಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ವರಿಷ್ಠರು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

Mandya, incharge, minister, Gopalaiah, change,

Articles You Might Like

Share This Article