ಮಂಡ್ಯ, ಸೆ.16- ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗಮಿಸಲಿದ್ದಾರೆ ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.
ಲಖನೌನಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಸಚಿವ ಡಾ.ನಾರಾಯಣಗೌಡ ಅವರು ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಆಹ್ವಾನ ನೀಡಿದರು.
ಅ.13 ರಿಂದ 16ರ ವರೆಗೂ ಕೆಆರ್ ಪೇಟೆಯ ಲಕ್ಷ್ಮಣತೀರ್ಥ-ಹೇಮಾವತಿ-ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಈ ಮಹಾಕುಂಭ ಮೇಳದಲ್ಲಿ ಅ.16ರಂದು ಪಾಲ್ಗೊಳ್ಳುವುದಾಗಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೂ ಗೋರಖನಾಥೇಶ್ವರನ ಸಂಬಂಧದ ಬಗ್ಗೆ ಯೋಗಿಜೀ ಮೆಲುಕು ಹಾಕಿದರು. ಪರಶುರಾಮ ಕಥೆ, ಕಾಲಭೈರವೇಶ್ವರನ ಕಥೆ, ಧರ್ಮಸ್ಥಳ ಮತ್ತು ಆದಿಚುಂಚನಗಿರಿಯ ಇತಿಹಾಸ ಹಾಗೂ ನಾಥ ಪರಂಪರೆಯ ಹಾಗೂ ಕರ್ನಾಟಕ ಸರ್ಕಾರ ಪ್ರಸ್ತುತ ಕೈಗೊಂಡಿರುವ ಅಭಿವೃದ್ಧಿ ಕಾರ್ಯ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತುಕತೆ ನಡೆಸಿದರು.
ಇದೇ ವೇಳೆ ಕುವೆಂಪು ಅವರ ರಾಮಯಣ ದರ್ಶನಂ ಹಾಗೂ ಎಸ್.ಎಲ್. ಭೈರಪ್ಪನವರ ಪರ್ವ ಪುಸ್ತಕವನ್ನು ಯೋಗಿ ಆದಿತ್ಯನಾಥ್ ಅವರಿಗೆ ಸಚಿವರು ನೀಡಿದರು. ಕೆಪಿಎಸ್‍ಸಿ ಸದಸ್ಯ ಪ್ರಭುದೇವ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.