ಮಾಣಿಕ್ ಷಾ ಮೈದಾನಕ್ಕೆ ಪೊಲೀಸ್ ಸರ್ಪಗಾವಲು

Social Share

ಬೆಂಗಳೂರು, ಜ.24-  ಗಣರಾಜ್ಯೋತ್ಸವ ಸುಲಲಿತವಾಗಿ ನಡೆಯಲು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ದೇಶನದಂತೆ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ, ವಾರ್ತಾ ಇಲಾಖೆ, ಮಿಲಿಟರಿ ಹಾಗೂ ಇತರೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಪರೇಡ್ ಕವಾಯತಿನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಶೀಸ್ ಚನ್ನಪ್ಪ ಮತ್ತು ಸಹಾಯಕ ನಾಯಕತ್ವ ಮೇಜರ್ ಲಲಿತ್‍ಕುಮಾರ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ವಿಶೇಷ ತುಕಡಿ ಒಳಗೊಂಡಂತೆ ಒಟ್ಟು 16 ತುಕಡಿಗಳು, ಐದು ವಾದ್ಯವೃಂದ, ಎರಡು ಡಿ ಸ್ಕ್ವಾಡ್, ನಾಲ್ಕು ಕ್ಯೂಆರ್‍ಡಿ, ಎರಡು ಆರ್‍ಐವಿ ಮತ್ತು ಆರು ಅಶ್ವದಳಗಳ ತಂಡಗಳು ಸೇರಿ 29 ಅಧಿಕಾರಿಗಳು ಮತ್ತು 464 ಸಿಬ್ಬಂದಿ ಭಾಗವಹಿಸಲಿದ್ದಾರೆ.
ಬಂದೋಬಸ್ತ್ ಕರ್ತವ್ಯಕ್ಕೆ ಸಿವಿಲ್ ಮತ್ತು ಸಂಚಾರಿ ಪೊಲೀಸ್ ಸೇರಿದಂತೆ 11 ಡಿಸಿಪಿ, 20 ಎಸಿಪಿ, 60 ಇನ್ಸ್‍ಪೆಕ್ಟರ್‍ಗಳು, 125 ಪಿಎಸ್‍ಐಗಳು ಒಳಗೊಂಡಂತೆ 1600 ಇತರೆ ಅಧಿಕಾರಿ, ಸಿಬ್ಬಂದಿಗಳು ಮತ್ತು ಕೆಎಸ್‍ಆರ್‍ಪಿ ಹಾಗೂ ಸಿಎಆರ್, ಹೋಮ್‍ಗಾರ್ಡ್, ಸಂಚಾರ ವಾರ್ಡನ್ಸ್ ಸೇರಿದಂತೆ ಎಲ್ಲ ಘಟಕಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ವಾಹನಗಳು, ಕ್ಷಿಪ್ರ ಕಾರ್ಯಾಚರಣೆ ಪಡೆ, ಆರ್‍ಐವಿ, ಡಿ ಸ್ಕ್ವಾಡ್ ನಿಯೋಜಿಸಲಾಗಿರುತ್ತದೆ. ಜತೆಗೆ ಗರುಡಪಡೆಯನ್ನು ಕಾಯ್ದಿರಿಸಲಾಗಿದೆ.
ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಬ್ಯಾಗೇಜ್ ಸ್ಕ್ಯಾನರ್‍ಗಳನ್ನು ಆಯಾಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ಕಮಲ್‍ಪಂತ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article