ಮಂಗಳೂರು ಸ್ಪೋಟದ ರುವಾರಿ ಶಾರೀಕ್‍ಗೆ ಐಸಿಸ್ ಲಿಂಕ್

Social Share

ಬೆಂಗಳೂರು,ನ.21- ಮಂಗಳೂರಿನ ನಾಗೋರಿಯಲ್ಲಿ ಸಂಭವಿಸಿದ ಆಟೋದಲ್ಲಿ ಸ್ಪೋಟ ಪ್ರಕರಣದ ಆರೋಪಿ ಶಾರೀಕ್ ಅಂತಾರಾಷ್ಟ್ರೀಯ ಉಗ್ರ ಸಂಘಟನೆಗಳಿಂದ ಪ್ರಭಾವಿತನಾಗಿದ್ದ ಎಂದು ಸ್ಪಷ್ಟಪಡಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‍ಕುಮಾರ್, ಕಡಿಮೆ ತೀವ್ರತೆಯ ಸ್ಪೋಟದಿಂದ ಭಾರೀ ದುರಂತವೊಂದು ತಪ್ಪಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನ.19ರಂದು ಮಂಗಳೂರಿನ ನಾಗೋರಿ ಪ್ರದೇಶದಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಕುರಿತಂತೆ ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸುದೀರ್ಘ ವಿವರಣೆ ನೀಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಈವರೆಗೂ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ, ಮೈಸೂರಿನ ಇಬ್ಬರು, ಮಂಗಳೂರಿನ ಒಬ್ಬ ಹಾಗೂ ಊಟಿಯಿಂದ ಒಬ್ಬನನ್ನು ಕರೆತರಲಾಗಿದೆ.

ಶಾರೀಕ್ ಸ್ವಯಂ ತಯಾರಿಸಿದ್ದ ಕುಕ್ಕರ್ ಬಾಂಬ್‍ನ್ನು ಸರಿಯಾಗಿ ಜೋಡಿಸಿರಲಿಲ್ಲ. ಹೀಗಾಗಿ ಅದು ಆಟೋದಲ್ಲೇ ಸಂಜೆ 4.40ರ ಸುಮಾರಿಗೆ ನಾಗೋರಿ ಬಳಿ ಸ್ಪೋಟವಾಗಿದೆ. ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿ ಮತ್ತು ಶಾರೀಕ್‍ಗೆ ಗಾಯವಾಗಿದೆ.

ಪುರುಷೋತ್ತಮ್ ಪೂಜಾರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಕುಟುಂಬದ ಸದಸ್ಯರ ಬೇಡಿಕೆ ಈಡೇರಿಸಲು ಸ್ಪಂದಿಸಲಾಗುವುದು ಮತ್ತು ಸರ್ಕಾರದ ವತಿಯಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು. ಶಾರೀಕ್ ಗುಣಮುಖನಾದ ಬಳಿಕ ಆತನ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿಯನ್ನು ಅವರ ಸಂಬಂಧಿಕರು ಇಂದು ಬೆಳಗ್ಗೆ ಗುರುತಿಸಿದ್ದಾರೆ. ಆತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಾಸಿ ಎಂದು ಸ್ಪಷ್ಟವಾಗಿದೆ. ಈತನ ಮೇಲೆ ಈ ಮೊದಲು ಮೂರು ಪ್ರಕರಣಗಳು ದಾಖಲಾಗಿವೆ.

ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆಯಲ್ಲಿ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಯುಎಪಿಎ ಕಾಯ್ದೆ ಬಳಸಲಾಗಿದೆ. ಆರೋಪಿ ಶಾರೀಕ್ ಬಿಕಾಂ ಪದವೀಧರನಾಗಿದ್ದು, ಆಫ್‍ಲೈನ್, ಆನ್‍ಲೈನ್‍ನಲ್ಲಿ ಬಾಂಬ್ ತಯಾರಿಕೆಯ ಸಲಕರಣೆಗಳನ್ನು ಖರೀದಿಸಿದ್ದಾನೆ. ಈ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿವೆ.

ತೀರ್ಥಹಳ್ಳಿಯ ತುಂಗಭದ್ರಾ ನದಿ ತೀರದಲ್ಲಿ ಪ್ರಾಯೋಗಿಕ ಸೋಟದ ಪೂರ್ವಾಭ್ಯಾಸ ನಡೆಸಿದ್ದಾನೆ. 2020ರ ಸೆಪ್ಟೆಂಬರ್‍ನಲ್ಲಿ ಗ್ರಾಮಾಂತರ ಪೊಲೀಸರು ಪ್ರಾಯೋಗಿಕ ಸ್ಪೋಟದ ಪ್ರಕರಣದಲ್ಲಿ ಶಾರೀಕ್ ಮತ್ತು ಮಾಜ್ ವಿರುದ್ಧ ಪ್ರಕರಣ ದಾಖಲಿಸಿ ಮಾಜ್‍ನನ್ನು ಬಂಧಿಸಿದ ವೇಳೆ ಶಾರೀಕ್ ತಲೆಮರೆಸಿಕೊಂಡಿದ್ದ.

ಕೊಯಮತ್ತೂರು, ಕೇರಳ, ತಮಿಳುನಾಡು ಅಲ್ಲೆಲ್ಲ ತಿರುಗಾಡಿ ಕಳೆದ ಸೆ.20ರಂದು ಮೈಸೂರಿಗೆ ಬಂದಿದ್ದ. ಅಲ್ಲಿ ಲೋಕನಾಯಕನಗರದಲ್ಲಿ ಮೋಹನ್‍ಕುಮಾರ್ ಎಂಬುವರ ಮನೆಯಲ್ಲಿ ಬಾಡಿಗೆಗೆ ಇದ್ದ. ಮನೆ ಮಾಲೀಕರಿಗೆ ಈತನ ಬಗ್ಗೆ ಗೊತ್ತಿರಲಿಲ್ಲ. ಹುಬ್ಬಳ್ಳಿ-ಧಾರವಾಡ ನಿವಾಸಿ ಪ್ರೇಮ್‍ರಾಜ್ ಎಂಬ ಆಧಾರ್ ಕಾರ್ಡ್ ಹೊಂದಿದ್ದ.

ಈ ದಾಖಲೆಯನ್ನು ಪರಿಶೀಲಿಸಿದಾಗ ಪ್ರೇಮ್‍ರಾಜ್ ತುಮಕೂರಿನಲ್ಲಿ ರೈಲ್ವೆ ಗ್ಯಾಂಗ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು ಆರೋಪಿಗಳ ಜೊತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಅವರು ತಿಳಿಸಿದರು.

ನಾಗೋರಿ ಸ್ಪೋಟದ ಬಳಿಕ ಮಂಗಳೂರು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮನೆ ಶೋಧ ನಡೆಸಿದಾಗ 150 ಬೆಂಕಿಪೊಟ್ಟಣ, ಸಲರ್, ಫಾಸ್ಪರಸ್, ಸಕ್ರ್ಯೂಟ್, ನೆಟ್ಟು, ಬೋಲ್ಟ್ ಸೇರಿದಂತೆ ಬಾಂಬ್ ತಯಾರಿಕೆಗೆ ಬೇಕಾದ ಸಲಕರಣೆಗಳು ಪತ್ತೆಯಾಗಿವೆ.

ಶಾರೀಕ್‍ನೊಂದಿಗೆ ಅರಾಫತ್ ಆಲಿ, ಸೌದತ್ ಆಲಿ, ಮದೀರ್ ಅಹಮ್ಮದ್, ಮಂಗಳೂರು ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಲ್ಲಿ ದಾಖಲಾಗಿದ್ದಾರೆ.

ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

ಅರಾಫತ್ ತಲೆಮರೆಸಿಕೊಂಡಿದ್ದು, ದುಬೈನಲ್ಲಿ ನೆಲೆಸಿದ್ದಾನೆ. ಮುಸಾಬಿರ್ ಹುಸೇನ್ ಮತ್ತು ಅರಾಫತ್ ಆಲಿ ಜೊತೆ ಶಾರೀಕ್ ಸಂಪರ್ಕದಲ್ಲಿರುವುದಾಗಿ ತಿಳಿದುಬಂದಿದೆ. ಮತ್ತೊಬ್ಬ ಅಂತಾರಾಷ್ಟ್ರೀಯ ಉಗ್ರ ಅಬ್ದುಲ್ ಮತೀನ್ ತಾಹ ಬಗ್ಗೆ ಸುಳಿವು ನೀಡಿದವರಿಗೆ ಎನ್‍ಐಎ 2 ಲಕ್ಷ ಬಹುಮಾನ ಘೋಷಿಸಿದೆ. ಶಾರೀಕ್ ಈತನನೊಂದಿಗೂ ಸಂಪರ್ಕದಲ್ಲಿದ್ದಾನೆ ಎಂದು ಹೇಳಿದರು.

ಆರೋಪಿ ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿರುವುದು ಚಟುವಟಿಕೆಗಳಿಂದ ಕಂಡುಬರುತ್ತಿದೆ. ಆದರೆ ಅದಕ್ಕೆ ಪೂರಕ ಸಾಕ್ಷ್ಯಗಳು ಇನ್ನು ಸಿಕ್ಕಿಲ್ಲ. ಪ್ರಕರಣದ ತನಿಖೆಗಾಗಿ 5 ತಂಡಗಳನ್ನು ರಚಿಸಲಾಗಿದೆ. 2 ಕಾರ್ಯಾಚರಣೆ ತಂಡಗಳು, ಒಂದು ತನಿಖಾ ತಂಡ, ಒಂದು ಸಿಡಿಆರ್ ವಿಶ್ಲೇಷಣಾ ತಂಡ ಮತ್ತೊಂದು ಡಿಜಿಟಲ್ ಫೆÇೀರೆನ್ಸಿಕ್ ತಂಡ ಕೆಲಸ ಮಾಡುತ್ತಿವೆ ಎಂದು ವಿವರಣೆ ನೀಡಿದರು.

ಘಟನೆಗೆ ಸಂಬಂಧಪಟ್ಟಂತೆ ಈವರೆಗೂ 7 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಇಂದು ಬೆಳಗ್ಗೆ ಶಿವಮೊಗ್ಗ ಮತ್ತು ಮಂಗಳೂರು ನಗರದಲ್ಲಿ ಶೋಧ ನಡೆದಿದೆ. ನಿನ್ನೆ ತೀ.ನರಸಿಪುರ, ಮೈಸೂರಿನಲ್ಲಿ ಶೋಧ ನಡೆಸಲಾಗಿತ್ತು. ಕಾರ್ಯಾಚರಣೆ ವೇಳೆ ಎಲೆಕ್ಟ್ರಾನಿಕ್ ಡಿವೈಸ್‍ಗಳು ಪತ್ತೆಯಾಗಿವೆ ಎಂದು ಹೇಳಿದರು.

ಆರೋಪಿಗಳು ಬೇರೆಯವರ ದಾಖಲಾತಿಗಳಲ್ಲಿ ಮೊಬೈಲ್ ಸಿಮ್‍ಕಾರ್ಡ್ ಪಡೆದುಕೊಂಡಿದ್ದಾರೆ. ಸುರೇಂದ್ರ, ಸೊಂಡೂರಿನ ಅರುಣ್ ಗಾವ್ಲಿ ಹೆಸರಿನಲ್ಲಿನ ಸಿಮ್‍ಕಾರ್ಡ್ ಜೊತೆ ಶಾರೀಕ್ ಗದಗದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಪಡೆದ ಸಿಮ್‍ಕಾರ್ಡ್‍ನಲ್ಲಿ ಸಂಹನ ನಡೆಸಿದ್ದಾನೆ. ಈ ಎಲ್ಲಾ ಸಾಕ್ಷ್ಯಗಳನ್ನ ಪರಿಗಣಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

2023ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಪ್ರಕಟ

ಆರೋಪಿಗೆ ಯಾರು ಹಣಕಾಸು ನೀಡುತ್ತಿದ್ದರು, ಬೆಂಗಾವಲಾಗಿದ್ದವರು ಯಾರ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುತ್ತೇವೆ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.

ಆರೋಪಿಗೆ ಬಾಂಬ್ ತಯಾರಿಕೆ ಬಗ್ಗೆ ಯಾರಾದರೂ ಸಲಹೆ ನೀಡಿ ತರಬೇತಿ ಕೊಟ್ಟಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮಂಗಳೂರು ಪೊಲೀಸರ ಸಮಯ ಪ್ರಜ್ಞೆ ಮತ್ತು ಮುಂಜಾಗ್ರತಾ ಕ್ರಮಗಳಿಂದ ದೊಡ್ಡ ಅನಾಹುತವೊಂದು ತಪ್ಪಿದೆ.

ತುಂಬಾ ಭಯಾನಕವಾಗಿದೆ ಕುಕ್ಕರ್ ಕಿರಾತಕ ಶಾರೀಕ್ ಹಿನ್ನೆಲೆ

ಇದು ಚುನಾವಣಾ ವರ್ಷವಾಗಿರುವುದರಿಂದ ಶಾಂತಿಭಂಗದ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಪೊಲೀಸರು ಮತ್ತಷ್ಟು ಜಾಗೃತರಾಗಿದ್ದಾರೆ. ನಾಗರಿಕರು ಕೂಡ ನೆರೆಹೊರೆಯವರ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು, ಸಿಸಿಟಿವಿ ಅಳವಡಿಕೆಗಳು ಹೆಚ್ಚಾಗಬೇಕು ಎಂದು ಸಲಹೆ ಮಾಡಿದರು.

Mangalore, autorickshaw, blast, accused, touch, ISIS, handlers, Police,

Articles You Might Like

Share This Article