ಗ್ರಾ.ಪಂ ಚುನಾವಣೆಯಲ್ಲಿ ಸೋತು ಗೆದ್ದವರ ನಡುವೆ ಜಡೆ ಜಗಳ..!

ಬೆಳಗಾವಿ, ಜ.4- ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋತು ಗೆದ್ದವರ ನಡುವಿನ ಬಡಿದಾಟ ಮುಂದುವರೆದಿದೆ. ಗೋಕಾಕ್ ತಾಲ್ಲೂಕಿನ ತುಕ್ಕಾಹಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ಸೋತು ಗೆದ್ದವರ ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಡೆ ಜಗಳ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ತುಕ್ಕಾಹಟ್ಟಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸೋಲನನ್ನು ಅನುಭವಿಸಿದ್ದ ರಾಮಪ್ಪ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ್ದರು. ಅವರ ಈ ನಡೆಯನ್ನು ವಿಜೇತ ಅಭ್ಯರ್ಥಿ ಸುನಂದಾ ಪ್ರಶ್ನಿಸಿದ್ದರು.

ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿ ರಾಮಪ್ಪನ ಕಡೆಯ ಮಹಿಳೆಯರು ಹಾಗೂ ವಿಜೇತ ಅಭ್ಯರ್ಥಿ ಸುನಂದಾ ಅವರು ಕೈ ಕೈ ಮಿಲಾಯಿಸಿದ್ದರು.ಮಹಿಳೆಯರು ಪರಸ್ಪರ ಜಡೆ ಎಳೆದುಕೊಂಡು ಕಿತ್ತಾಡುತ್ತಿದ್ದಾಗ ಎರಡು ಕುಟುಂಬದವರು ಕಲ್ಲು ತೂರಾಟ ನಡೆಸಿದ್ದೇ ಅಲ್ಲದೆ ಕೈಗೆ ಸಿಕ್ಕ ಬಡಿಗೆ, ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಘಟಪ್ರಭಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಎರಡೂ ಕಡೆಯವರು ನೀಡಿರುವ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ಗ್ರಾಮ ಪಂಚಾಯ್ತಿ ಚುನಾವಣೆ ನಂತರ ಸೋತು ಗೆದ್ದವರ ನಡುವಿನ ವೈಷಮ್ಯ ಹೆಚ್ಚಾಗುತ್ತಿದ್ದು , ರಾಜ್ಯದ ಹಲವೆಡೆ ಪರಸ್ಪರ ಬಡಿದಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲ್ಲೂಕಿನ ಜಾವೂರುಹೊಸಹಳ್ಳಿಯಲ್ಲಿ ಗೆದ್ದ ಅಭ್ಯರ್ಥಿ ಚಂದ್ರಪ್ಪ ಎಂಬುವವರ ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ 5 ರಾಸುಗಳು ಸುಟ್ಟು ಕರಕಲಾಗಿದ್ದವು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಸಮೀಪದ ಗ್ರಾಮವೊಂದರಲ್ಲಿ ಸಮ ಬಲ ಸಾಧಿಸಿದ್ದ ಅಭ್ಯರ್ಥಿಗಳು ಲಾಟರಿಯಿಂದ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದ್ದರು.

ಇದರಿಂದ ರೊಚ್ಚಿಗೆದ್ದ ಸೋತ ಅಭ್ಯರ್ಥಿ ಬೆಂಬಲಿಗರು ಗೆದ್ದ ಅಭ್ಯರ್ಥಿಯ ಹೊಟೇಲ್‍ಗೆ ಬೆಂಕಿ ಇಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆ ಸಗನಿಪುರದಲ್ಲಿ ಹೊಸ ವರ್ಷದ ಸಂದರ್ಭದಲ್ಲಿ ಸೋತು ಗೆದ್ದ ಅಭ್ಯರ್ಥಿಗಳ ನಡುವೆ ಬಡಿದಾಟ ನಡೆದು ಪರಸ್ಪರ ಚೂರು ಇರಿದುಕೊಂಡು 10ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ನಡೆದಿತ್ತು.