ಗ್ರಾ.ಪಂ.ಚುನಾವಣೆ : ಗೆದ್ದ-ಸೋತವರ ನಡುವೆ ಮಾರಾಮಾರಿ

ಹಾಸನ/ಚಿಕ್ಕಮಗಳೂರು, ಜ.2- ಚುನಾವಣೆಯಲ್ಲಿ ಸೋತವರು ಮತ್ತು ಗೆದ್ದ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸುವಾಗ 2 ಗುಂಪುಗಳ ನಡುವೆ ಮಾರಾಮಾರಿ ನಡೆದು 10 ಮಂದಿ ಆಸ್ಪತ್ರೆ ಸೇರಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕು ಸಗನಿಪುರದಲ್ಲಿ ನಡೆದಿದೆ.

ತಾಲ್ಲೂಕಿನ ಸಗನಿಪುರ ಗ್ರಾಪಂನಲ್ಲಿ ಯತೀಶ್ ಗೆಲುವು ಸಾಧಿಸಿದ್ದು, ನಾಗೇಶ್ ಎಂಬುವವರು ಗ್ರಾಪಂ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಈ ಇಬ್ಬರ ಬೆಂಬಲಿಗರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಡಿ.31ರ ರಾತ್ರಿ ಸೇರಿದ್ದರು.

ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿಯೇ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹಾಸನದ ಬೈರಗೊಂಡನಹಳ್ಳಿ ಬೋವಿ ಕಾಲೋನಿಯಲ್ಲಿ ಸೋತು ಗೆದ್ದ ಬೆಂಬಲಿಗರು ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಉಮೇಶ್ ಎಂಬುವವರು ಗೆಲುವು ಸಾಧಿಸಿದ್ದು, ಆನಂದ್ ಎಂಬುವವರು ಸೋಲನುಭವಿಸಿದ್ದರು. ನಿನ್ನೆ ಬೆಂಬಲಿಗರಿಂದ ಮಾತಿನ ಚಕಮಕಿ ನಡೆದಿದ್ದು, ಮಾತಿಗೆ ಮಾತು ಬೆಳೆದು ಕಲ್ಲು, ದೊಣ್ಣೆಗಳನ್ನು ಹಿಡಿದು ಬೆಂಬಲಿಗರು ಹೊಡೆದಾಟ ಮಾಡಿಕೊಂಡಿದ್ದು, ಹಲವರಿಗೆ ಗಾಯಗಳಾಗಿದ್ದು, ಅರಸೀಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಗ್ರಾಪಂ ಚುನಾವಣೆಗೂ ಮುನ್ನ ಹೊಡೆದಾಟ, ಬಡಿದಾಟಗಳು ನಡೆಯುತ್ತಿದ್ದವು. ಆದರೆ, ಚುನಾವಣೆ ನಂತರ ಈಗ ದ್ವೇಷ, ಅಸೂಯೆ, ಹೊಡೆದಾಟ, ಬಡಿದಾಟದಂತಹ ಪ್ರಕರಣಗಳು ನಡೆಯಲಾರಂಭಿಸಿವೆ.