ನವದೆಹಲಿ,ಆ.21- ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಶಿಸೋಡಿಯಾ ಅವರಿಗೆ ಸಿಬಿಐ ಲುಕೌಟ್ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಸಿಬಿಐ ಕಳೆದ ಶುಕ್ರವಾರ ದೆಹಲಿ, ಉತ್ತರಪ್ರದೇಶ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಮನೀಶ್ ಶಿಸೋಡಿಯಾ ಸೇರಿದಂತೆ 13 ಮಂದಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈಗ ಲುಕೌಟ್ ನೋಟಿಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಶಿಸೋಡಿಯ ಇಂದು ಟ್ವೀಟ್ ಮಾಡಿದ್ದು, ನಿಮ್ಮ ಎಲ್ಲ ದಾಳಿಗಳು ವಿಫಲವಾಗಿವೆ. ಏನನ್ನೂ ಪತ್ತೆ ಮಾಡಲು ಆಗಿಲ್ಲ.ಒಂದೇ ಒಂದೂ ಪೈಸೆ ದುರುಪಯೋಗವಾಗಿರುವುದನ್ನು ಕಂಡು ಹಿಡಿಯಲಾಗಿಲ್ಲ. ಈಗ ನೀವು ಲುಕೌಟ್ ನೋಟಿಸ್ ನೀಡಿದ್ದೀರಾ… ಅದರಲ್ಲಿ ಮನೀಶ್ ಶಿಸೋಡಿಯಾ ಕಣ್ಮರೆಯಾಗಿದ್ದಾರೆ ಎಂದು ಹೇಳಲಾಗಿದೆ. ಮೋದಿಯವರೇ ಏನಿದು ನಿಮ್ಮ ನಾಟಕ ಎಂದು ಪ್ರಶ್ನಿಸಿದ್ದಾರೆ.
ನಾನು ದೆಹಲಿಯಲ್ಲಿ ಮುಕ್ತವಾಗಿ ಓಡಾಡುತ್ತಿದ್ದೇನೆ. ನಿಮಗೆ ನಾನು ಕಾಣಿಸುತ್ತಿಲ್ಲವೇ ಹೇಳಿ, ಎಲ್ಲಿಗೆ ಬರಬೇಕು, ಯಾವಾಗ ಬರಬೇಕು, ನಾನು ಸಿದ್ದನಿದ್ದೇನೆ ಎಂದು ಸವಾಲು ಹಾಕಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿದಿನ ಬೆಳಗ್ಗೆ ಸಿಬಿಐ ಮತ್ತು ಇಡಿ ಮೂಲಕವೇ ಕೇಂದ್ರ ಆಟ ಶುರು ಮಾಡುತ್ತದೆ ಎಂದು ಲೇವಡಿ ಮಾಡಿದ್ದಾರೆ.
ದೇಶದಲ್ಲಿ ಜನ ಮಿತಿಮೀರಿದ ಹಣದುಬ್ಬರ, ಬೆಲೆಏರಿಕೆ ವಿರುದ್ಧ ಸಂಘರ್ಷಕ್ಕೀಡಾಗಿದ್ದಾರೆ, ಯುವಕರು ನಿರುದ್ಯೋಗದಿಂದ ಸಮಸ್ಯೆಗೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಜೊತೆಗೂಡಿಸಿಕೊಂಡು ಹಣದುಬ್ಬರ ಮತ್ತು ನಿರುದ್ಯೋಗದ ವಿರುದ್ಧ ಹೋರಾಟ ಮಾಡಬೇಕಿತ್ತು.
ಆದರೆ ಇಡೀ ದೇಶದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಲುಕೌಟ್ ನೋಟಿಸ್ ಎಂದರೆ ತಲೆಮರೆಸಿಕೊಂಡಿರುವ ಆರೋಪಿಗಳು ದೇಶಬಿಟ್ಟು ಪರಾರಿಯಾಗಲು ಅವಕಾಶ ನಿರ್ಬಂಧಿಸುವುದು. ವಿಮಾನ ನಿಲ್ದಾಣ, ಬಂದರು ಸೇರಿದಂತೆಎಲ್ಲ ಕಡೆ ಲುಕೌಟ್ ನೋಟಿಸ್ ಜಾರಿಯಾಗಲಿದ್ದು, ಶಂಕಿತ ಅಥವಾ ಘೋಷಿತ ಆರೋಪಿ ವಾಯು ಅಥವಾ ವಿಮಾನಮಾರ್ಗದಲ್ಲಿ ಬೇರೆ ದೇಶಕ್ಕೆ ತೆರಳದಂತೆ ತಡೆಯುವುದಾಗಿದೆ.
ಆದರೆ ದೆಹಲಿಯಲ್ಲೇ ಇರುವ ಉಪಮುಖ್ಯಮಂತ್ರಿಗೂ ಲುಕೌಟ್ ನೋಟಿಸ್ ಜಾರಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.