ನವದೆಹಲಿ, ಆ.22- ಅಮ್ ಆದ್ಮಿ ಪಕ್ಷವನ್ನು ಹೊಡೆದು, ಬಿಜೆಪಿ ಸೇರ್ಪಡೆಯಾಗಿದರೆ, ಸಿಬಿಐ, ಇಡಿ ಸೇರಿದಂತೆ ಎಲ್ಲ ಪ್ರಕರಣಗಳನ್ನು ಮುಗಿಸುತ್ತೇವೆ ಎಂದು ಬಿಜೆಪಿಯಿಂದ ನನಗೆ ಸಂದೇಶ ಬಂದಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು ಟ್ವೀಟ್ ಮಾಡಿರುವ ಅವರು, ನಾನು ರಜಪೂತ್, ಮಹಾರಾಣ ಪ್ರತಾಪ್ ವಂಶಸ್ಥ. ನನ್ನ ತಲೆಯನ್ನು ಕತ್ತರಿಸಿಕೊಳ್ಳುತ್ತೇನೆಯೇ ಹೊರತು, ಭ್ರಷ್ಟರು ಮತ್ತು ಸಂಚುಕೋರರ ಮುಂದೆ ಮಂಡಿಯೂರುವುದಿಲ್ಲ ಎಂದು ಉತ್ತರ ನೀಡಿದ್ದೆ. ನನ್ನ ವಿರುದ್ಧ ಇರುವ ಅಷ್ಟು ಪ್ರಕರಣಗಳು ಸುಳ್ಳು, ನಿಮಗೆ ಏನು ಮಾಡಬೇಕು ಎನಿಸುತ್ತದೆಯೋ ಅದನ್ನು ಮಾಡಿ ಎಂದು ಸವಾಲು ಹಾಕಿದ್ದಾರೆ. ಸಿಸೋಡಿಯಾದ ಈ ಟ್ವೀಟ್ ಭಾರೀ ಸಂಚಲನ ಮೂಡಿಸಿದೆ.
ಮುಂದಿನ ವರ್ಷ ಚುನಾವಣೆ ನಡೆಯುವ ಗುಜರಾತ್ ರಾಜ್ಯಕ್ಕೆ ಮನೀಶ್ ಸಿಸೋಡಿಯಾ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಯಲ್ಲಿ ಎರಡು ದಿನಗಳ ಕಾರ್ಯಕ್ರಮಗಳಿಗಾಗಿ ಭೇಟಿ ನೀಡಲಿದ್ದಾರೆ. ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿರುವ ಸಿಬಿಐ, ಇತ್ತೀಚೆಗೆ ಏಳು ರಾಜ್ಯಗಳ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಪ್ರಕರಣದಲ್ಲಿ ಮನೀಸ್ ಸಿಸೋಡಿಯಾ ಸೇರಿದಂತೆ 15 ಮಂದಿ ಆರೋಪಿಗಳನ್ನು ಹೆಸರಿಸಲಾಗಿದೆ. ಮೊನ್ನೆಯಷ್ಟೆ ಸಿಸೋಡಿಯಾರಿಗೆ ಲುಕ್‍ಔಟ್ ನೋಟಿಸ್ ಕೂಡ ನೀಡಲಾಗಿತ್ತು.
ದಾಳಿಯ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಿಂದ ಹೊರ ರಾಜ್ಯಕ್ಕೆ ಪ್ರವಾಸ ಕೈಗೊಂಡಿರುವ ಆಪ್ ನಾಯಕರು ಗುಜರಾತ್‍ನಲ್ಲಿ ಪಕ್ಷದ ಸಂಘಟನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಕೇಜ್ರಿವಾಲ್ ನಾಯಕತ್ವದಲ್ಲಿ ದೆಹಲಿ ಮತ್ತು ಪಂಜಾಬ್‍ನಲ್ಲಿ ಆಪ್ ಸರ್ಕಾರಗಳು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕೈಗೊಂಡಿರುವ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಎಲ್ಲವನ್ನೂ ಜನ ನೋಡುತ್ತಿದ್ದಾರೆ. ಗುಜರಾತ್‍ನಲ್ಲೂ ಆಪ್‍ಗೆ ಅವಕಾಶ ನೀಡಲು ಬಯಸಿದ್ದಾರೆ.
ಬಿಜೆಪಿ ಸರ್ಕಾರ 27 ವರ್ಷದಲ್ಲಿ ಗುಜರಾತ್ ಅಭಿವೃದ್ಧಿಗೆ ಏನನ್ನು ಮಾಡಿಲ್ಲ ಎಂದು ಸಿಸೋಡಿಯಾ ಈ ಮೊದಲು ಹೇಳಿದ್ದರು.
ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೋಡಿ ಸೋಮವಾರ ಗುಜರಾತ್‍ನ ಹಿಮಂತ್‍ನಗರ, ಮಂಗಳವಾರ ಭಾವನನಗರಕ್ಕೆ ಭೇಟಿ ನೀಡಲಿದೆ. ಎರಡು ದಿನಗಳ ಭೇಟಿಯಲ್ಲಿ ಪಕ್ಷದ ಸಂಘಟನೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರು ನಾಯಕರು ಭಾಗವಹಿಸುತ್ತಿದ್ದಾರೆ.