ಮೈಸೂರು,ಫೆ.17- ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ-ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರು ಹಾಗೂ ಪದ್ಮಶ್ರೀ ಪುರಸ್ಕøತರಾದ ಮಾತಾ ಮಂಜಮ್ಮ ಜೋಗತಿ ಜನಸಾಮನ್ಯರಿಗೆ ಕರೆ ಕೊಟ್ಟಿದ್ದಾರೆ.
ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2 ತಿಂಗಳ ಕಾಲ ಮೂಕ ಸ್ಪಂದನೆ ಎಂಬ ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ನಗರದಲ್ಲಿ ಹಮ್ಮಿಕೊಂಡಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಕನ್ನಡಭವನದಲ್ಲಿ ಮಂಜಮ್ಮ ಜೋಗತಿ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಪರಿಸರ ರಕ್ಷತಿ ರಕ್ಷಿತಃ ಪರಿಸರ ಸ್ನೇಹಿ ತಂಡ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2 ತಿಂಗಳ ಕಾಲ ಮೂಕ ಸ್ಪಂದನೆ ಎಂಬ ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ, ಬೇಸಿಗೆಯ ದಿನ ಇನ್ನೇನು ಆರಂಭಗೊಂಡಿದ್ದು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸುವ ಹಾದಿಯಲ್ಲಿರುತ್ತವೆ ಎಂದರು.
ಜನವಸತಿ ಮತ್ತು ಜನಸಂಖ್ಯೆಗನುಗುಣವಾಗಿ ಮೊಬೈಲ್ ಮತ್ತು ಇತರೆ ತರಂಗದಿಂದಾಗಿ ಹಾಗೂ ಅಗತ್ಯ ನಾಗರೀಕ ಸವಲತ್ತುಗಳ ನೆರಳಿನಡಿಯಲ್ಲಿ ಈಗಾಗಲೇ ಸಂತತಿ ಕ್ಷೀಣಿಸುತ್ತಿರುವ ಹಲವಾರು ಪಕ್ಷಿಗಳು ನಶಿಸಿ ಹೋಗುತ್ತಿವೆ. ಅಳಿದು ಉಳಿದಿವೆಯೇನೋ ಎಂಬಂತಿರುವ ಜನತೆಯ ಮಧ್ಯೆಯೇ ಬದುಕಿ ಬೆರೆತು ಜೀವಿಸುವ ಪ್ರಾಣಿಪಕ್ಷಿ ಸಂಕುಲಕ್ಕಿಂದು ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಪರಿತಪಿಸುವ ಕಾಲ ಇದಾಗಿದ್ದು, ಈ ಭೂಮಂಡಲದಲ್ಲಿ ಸರ್ವಜೀವಿಗಳಿಗೂ ಸಮಬಾಳು ಸ್ವತಂತ್ರತೆಯಿರಬೇಕು ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರು.
ಸಮಾಜಮುಖಿ ಟ್ರಸ್ಟ್ ನ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಕೆಲಸ ಯಶಸ್ವಿಗೊಳ್ಳಲಿ. ಸಾರ್ವಜನಿಕರ ಪಾತ್ರ ಸೇವಾ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಹೇಳಿದರು. ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಮಾತನಾಡಿ, ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಸಹ ಮೈಸೂರು ನಗರದ ಪ್ರತಿಯೊಂದು ವಾರ್ಡ್ ನಲ್ಲಿ ಕಾಣಸಿಗುವ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ನೆಡಲಾಗುವುದು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ನಮ್ಮ ಅಭಿಯಾನಕ್ಕೆ ಕೈ ಜೋಡಿಸುವವರು ಬರುವ ಆಸಕ್ತರು 9880752727 / 8105078070 ಸಂಪರ್ಕಿಸಬಹುದು ಎಂದರು.
ಕೆಎಂಪಿಕೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಜಯ್ ಶಾಸ್ತ್ರಿ , ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್, ರೇಖಾ ಶ್ರೀನಿವಾಸ್, ಮಂಜುನಾಥ್, ರುದ್ರಾಕ್ಷಿ ಬಾಯಿ, ರೂಪ ಹೆಚ್.ಗೌಡ, ಕವಿತಾ ಮಠದ್, ಹೇಮಲತಾ, ರೇಣುಖ, ಜಾನಪದ ಅಕಾಡೆಮಿ ಸದಸ್ಯರಾದ ಶ್ರೀವತ್ಸ, ಜಿ.ಆರ್.ನಾರಾಯಣಪ್ಪ ಮಡ ಸಿರಿವಾರ, ರುದ್ರಾಕ್ಷಿ ಬಾಯ್, ಕುಡಿಯರ ಬೋಜಕ್ಕಿ ಮತ್ತಿತರರು ಹಾಜರಿದ್ದರು.
