ಬೆಂಗಳೂರು, ಜು.14- ಮಹಾರಾಷ್ಟ್ರ ಗಡಿಭಾಗದಲ್ಲಿ ಮರಾಠಿ ಭಾಷಿಕರು ಭಾಷಾ ವಿಷಯಕ್ಕೆ ನಡೆಸುವ ಹೋರಾಟಕ್ಕೂ, ಮರಾಠ ಸಮುದಾಯಕ್ಕೂ ಸಂಬಂಧವಿಲ್ಲ ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠ ಸಮುದಾಯ ಬೇರೆ. ಮರಾಠಿ ಭಾಷಿಕರು ಬೇರೆ. ಮರಾಠಿ ಭಾಷೆಯನ್ನು ಮರಾಠರು, ಬ್ರಾಹ್ಮಣರು, ಲಿಂಗಾಯತರು ಮಾತನಾಡುತ್ತಾರೆ. ಮರಾಠ ಸಮುದಾಯವು ರಾಜ್ಯದಲ್ಲಿ ಸಾಕಷ್ಟು ಇತಿಹಾಸ ಹೊಂದಿದೆ. ನಾವು ಇಲ್ಲಿನ ಮೂಲ ನಿವಾಸಿಗಳು, ಛತ್ರಪತಿ ಶಿಬಾಜಿಯ ಬಾಲ್ಯ ಕರ್ನಾಟಕದಲ್ಲಿಯಾಗಿದೆ. ಶಿವಾಜಿಯ ತಂದೆ ಷಹಾಜಿ ಬೆಂಗಳೂರಿನಲ್ಲಿ 20 ವರ್ಷ ಆಳ್ವಿಕೆ ಮಾಡಿದ್ದಾರೆ.
ಇಲ್ಲಿನ ದೇವಸ್ಥಾನಗಳನ್ನು ರಕ್ಷಣೆ ಮಾಡಿದ್ದಾರೆ. ಕಾಡು ಮಲ್ಲೇಶ್ವರ ದೇವಸ್ಥಾನವನ್ನು ಷಹಾಜಿ ನಿರ್ಮಾಣ ಮಾಡಿದ್ದಾರೆ. ದಾವಣಗೆರೆ ಜಿಲ್ಲಾಯಲ್ಲಿ ಷಹಾಜಿ ಸಮಾಧಿ ಇದೆ. ಷಹಾಜಿ ಅಣ್ಣ ಸಂಭಾಜಿ ಸಮಾಧಿ ಕೊಪ್ಪಳ ಜಿಲ್ಲಾಯ ಕನಕಗಿರಿಯಲ್ಲಿದೆ. ಮುಖ್ಯಮಂತ್ರಿಗಳು ಅವುಗಳ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.