ಮಾರ್ಕೋನಹಳ್ಳಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರ ಭೇಟಿ

Social Share

ತುಮಕೂರು, ಆ.12- ಸತತ ಮಳೆಯಿಂದ ಜಿಲ್ಲೆಯ ವಿವಿಧ ಕೆರೆ-ಕಟ್ಟೆಗಳು, ಅಣೆಕಟ್ಟೆಗಳು ತುಂಬಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಜ್ಯದಲ್ಲಿ ಸತತವಾಗಿ ಮುಂಗಾರು ಮಳೆಯಾಗುತ್ತಿರುವ ಹಾಗೆಯೇ ತುಮಕೂರು ಜಿಲ್ಲೆಯಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಹುಟ್ಟುವ ಶಿಂಸಾ, ಜಯಮಂಗಲ, ಗರುಡಧ್ವಜ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳು ತುಂಬಿ ಹರಿದ ಪರಿಣಾಮ ನದಿಪಾತ್ರಗಳ ಕೆರೆ-ಕಟ್ಟೆಗಳು ಸಹ ತುಂಬಿ ಕೋಡಿ ಬಿದ್ದಿವೆ.

ಶಿಂಷಾ ನದಿ ನೀರಿನಿಂದ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಯ ಮಂಗಳ ಜಲಾಶಯ ತುಂಬಿದ್ದು, ಜಲಾಶಯದಿಂದ ನದಿ ಪಾತ್ರಗಳಿಗೆ ನೀರು ಬಿಡುಗಡೆ ಮಾಡಲಾಗಿದೆ. ಮಳೆಯಿಂದ ಜನಜೀವನದ ಮೇಲಾಗಿರುವ ದುಷ್ಪರಿಣಾಮಗಳ ಅಧ್ಯಯನದಲ್ಲಿ ಸರ್ಕಾರ ತೊಡಗಿದೆ.

ಈ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಹೇಮಾವತಿ ನಾಲಾ ವಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಈ ವರ್ಷ ಜುಲೈ 30ರಿಂದ ಆಗಸ್ಟ್ 8ರವರೆಗೆ ಕಾವೇರಿಕೊಳ್ಳದಲ್ಲಿ ಆದ ಅತಿ ಹೆಚ್ಚು ಮಳೆಯಿಂದ ರಾಜ್ಯದಲ್ಲಿ ಸುಮಾರು 76 ಕೆರೆ-ಕಟ್ಟೆಗಳು ಒಡೆದು ಹೋಗಿದ್ದು, ಹಲವಾರು ರಸ್ತೆ, ನಾಲೆಗಳು, ಸೇತುವೆಗಳು ಕೊಚ್ಚಿ ಹೋಗಿವೆ.ಸರ್ಕಾರಕ್ಕೆ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸುಮಾರು 90 ಕೋಟಿ ನಷ್ಟವಾಗಿದೆ ಎಂದು ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಆಗಿರುವ ಹಾನಿ ಬಗ್ಗೆ ಅಂದಾಜು ಮಾಡುವ ಸಲುವಾಗಿ ಪ್ರವಾಸ ಕೈಗೊಂಡಿದ್ದೇನೆ. ಮಂಡ್ಯ ಜಿಲ್ಲೆಯ ಮದ್ದೂರಿನಿಂದ ಹೊರಟು ಇಲ್ಲಿಗೆ ಬಂದಿದ್ದೇನೆ. ಅಕಾರಿಗಳಿಗೆ ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದ್ದೇನೆ.

ತಾತ್ಕಾಲಿಕ ದುರಸ್ತಿಗಾಗಿ ತಕ್ಷಣವೇ 25-30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದೇನೆ. ಶಾಶ್ವತ ದುರಸ್ತಿಗೆ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಿದ್ದೇನೆ. ನಿಯಮಾನುಸಾರ ಮಂಜೂರಾತಿ ಪಡೆದು ಟೆಂಡರ್ ಕರೆದು ದುರಸ್ತಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾಳೆಯೇ ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಬಿಜೆಪಿ ಮುಖಂಡ ಕೃಷ್ಣಕುಮಾರ್, ನಾಗಮಂಗಲ ಶಾಸಕ ಸುರೇಶ್‍ಗೌಡ, ಹೇಮಾವತಿ ನಾಲಾವಲಯ ಮುಖ್ಯ ಎಂಜಿನಿಯರ್ ವರದಯ್ಯ, ಕಾರ್ಯಪಾಲಕ ಎಂಜಿನಿಯರ್‍ಗಳಾದ ಕೃಷ್ಣಪ್ಪ, ಮೋಹನ್‍ಕುಮಾರ್, ಎಇಇ ಮುರಳಿ, ಜಲಾಶಯದ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article