ಸಮಾಜ ಸೇವಕ ಮರೂರು ಹನುಮಂತಯ್ಯನವರ ಯಶೋಗಾಥೆ

Social Share

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಮರೂರು ಗ್ರಾಮದ ದೊಡ್ಡಹನುಮಂತಯ್ಯ ಮv್ರÀ್ತು ಕೆಂಪಮ್ಮ ದಂಪತಿಗಳ ಪುತ್ರರಾಗಿ 1939ರ ನವೆಂಬರ್ 23ರಲ್ಲಿ ಜನಿಸಿದ ಹನುಮಂತಯ್ಯನವರ ಬಾಲ್ಯ ಜೀವನ ಬಹಳ ಕಷ್ಟಕರವಾಗಿತ್ತು.

ಇಬ್ಬರು ಹೆಣ್ಣು ಮಕ್ಕಳ ನಂತರ ಜನಿಸಿದ ಹನುಮಂತಯ್ಯನವರು ತಂದೆಯ ಕೃಷಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಮರೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿದ ಹನುಮಂತಯ್ಯನವರು ಮಾಧ್ಯಮಿಕ ಶಿಕ್ಷಣವನ್ನು ನಾರಸಂದ್ರದಲ್ಲೂ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಕುದೂರಿನಲ್ಲೂ ಪಡೆದರು.

ಬೆಂಗಳೂರಿನಲ್ಲಿ ಇಂಟರ್ಮೀಡಿಯೆಟ್ ಪಾಸಾಗಿ ಇಂಜಿನಿಯರಿಂಗ್ ಪದವಿಗೆ ಸೇರಿದ ಹನುಮಂತಯ್ಯನವರು ನಂತರ ಆರ್. ವಿ. ಕಾಲೇಜಿನಲ್ಲಿ 1965-67ರ ಅವಯಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದರು. 1967ರ ಮೇ 26ರಂದು ಹನುಮಂತಯ್ಯನವರು ಲಲಿತರವರನ್ನು ವಿವಾಹವಾದರು.

ಉನ್ನತ ವ್ಯಾಸಂಗಕ್ಕೆಂದು ಅದೇ ವರ್ಷ ಅಮೆರಿಕಾಕ್ಕೆ ತೆರಳಿದ ಹನುಮಂತಯ್ಯನವರು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಿಂದ 1968ರಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮಿಚಿಗನ್ ಮತ್ತು ಇತರೆ ರಾಜ್ಯಗಳಲ್ಲಿ ಇಂಜಿನಿಯರರಾಗಿ ನೋಂದಣಿ ಮಾಡಿಸಿಕೊಂಡು ಹಲವು ವರ್ಷಗಳ ಕಾಲ ಖಾಸಗಿ ಕಂಪನಿಗಳಲ್ಲಿ ಮತ್ತು ಸ್ಥಳೀಯ ಸರ್ಕಾರದ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತ ಅಲ್ಲಿಯೇ ನೆಲೆ ಕಂಡುಕೊಂಡರು. ಮರೂರು ಹನುಮಂತಯ್ಯ ಎಂದು ಕರೆಸಿಕೊಂಡು ಹುಟ್ಟೂರಿಗೆ ಹೆಸರು ತಂದು ಕೊಟ್ಟಿದ್ದರು.

ಹನುಮಂತಯ್ಯನವರು ನೆಲೆಸಿದ್ದ ಮಿಚಿಗನ್ ರಾಜ್ಯದ ಫ್ಲಿಂಟ್ ನಗರದಲ್ಲಿ 1970ರ ದಶಕದಲ್ಲಿ ಕೇವಲ ಬೆರಳೆಣಿಕೆಯಷ್ಟು ಭಾರತೀಯರು ನೆಲೆಸಿದ್ದರು. ಭಾರತೀಯರು ಪಾಶ್ಚಿಮಾತ್ಯರೊಂದಿಗೆ ಬೆರೆಯುವುದಕ್ಕೆ ಸ್ವಲ್ಪ ಕಷ್ಟವಾಗುತ್ತಿದ್ದ ಸಂದರ್ಭದಲ್ಲಿ ಅಲ್ಲಿರುವ ಭಾರತೀಯರೆಲ್ಲರನ್ನೂ ಒಗ್ಗೂಡಿಸಿ ಭಾರತದಿಂದ ಕೆಲಸಕ್ಕೆಂದು ಬರುವವರಿಗೆ ನೆರವಾಗಲು ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಹನುಮಂತಯ್ಯನವರು ತಮ್ಮ ಸ್ನೇಹಿತರೊಡಗೂಡಿ ಇಂಡಿಯಾ ಕ್ಲಬ್ ಆಫ್ ಗ್ರೇಟರ್ ಫ್ಲಿಂಟ್ ಎಂಬ ಸಂಘವನ್ನು 1974ರ ಜೂನ್ನಲ್ಲಿ ಸ್ಥಾಪಿಸಿದರು. 1977-78ರ ಸಾಲಿನಲ್ಲಿ ಸ್ವತಃ ಹನುಮಂತಯ್ಯನವರು ಆ ಸಂಘದ ಅಧ್ಯಕ್ಷರಾಗಿದ್ದರು.

ಅನಿವಾಸಿ ಭಾರತೀಯರಲ್ಲಿ ಬಹಳ ಮಂದಿ ಅಲ್ಲಿನ ಸಂಸ್ಕೃತಿಯೊಂದಿಗೆ ಬೆರೆತು ತಮ್ಮ ಮೂಲಬೇರುಗಳನ್ನೇ ಮರೆತಿರುತ್ತಾರೆ. ಆದರೆ ಹನುಮಂತಯ್ಯನವರು ಮಾತ್ರ ಇದಕ್ಕೆ ಅಪವಾದ ಎನ್ನಬಹುದು. ಸರಳತೆ, ಬದ್ಧತೆ, ಕಾರ್ಯ ತತ್ಪರತೆ ಮುಂತಾದ ಮೌಲ್ಯಗಳು ಅಪರೂಪವಾಗುತ್ತಿರುವ ಈ ದಿನಗಳಲ್ಲ್ಲಿ ಶ್ರೀಯುತರು ಮಾತೃ ಭೂಮಿಯ ಸೇವೆಗೆ ಬದ್ಧರಾಗಿ ತಾವು ವಿದೇಶದಲ್ಲಿ ದುಡಿದ ದುಡಿಮೆಯ ಬಹುಪಾಲನ್ನು ಸ್ವದೇಶದ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದ್ದರು.

ಆ ಮೂಲಕ ಹುಟ್ಟಿದ ನೆಲದ ಋಣವನ್ನು ತೀರಿಸುತ್ತಿದ್ದರು. ದೇಶ ಬಿಟ್ಟು ಹೋಗಿ ಐದು ದಶಕಗಳೇ ಕಳೆದರೂ ಹುಟ್ಟಿದ ಊರಿನ ಅಭಿವೃದ್ಧಿಯ ಬಗ್ಗೆಯೇ ಚಿಂತಿಸುತ್ತಿದ್ದ ಹನುಮಂತಯ್ಯನವರ ಸಾಧನೆಗಳ ಬಗ್ಗೆ ಎಂಥವರಿಗಾದರೂ ಹೆಮ್ಮೆ ಎನಿಸುತ್ತದೆ.

ಅಮೆರಿಕಾಕ್ಕೆ ಹೋಗಿ ಹತ್ತು ವರ್ಷಗಳಾಗುವಷ್ಟರಲ್ಲಿ ತಾವು ಸಂಪಾದಿಸಿ ಕೂಡಿಟ್ಟ ಹಣವನ್ನು ಸ್ವಂತಕ್ಕಾಗಿ ಬಳಸದೇ ತಮ್ಮ ತಾಯ್ನಾಡಿನ ಋಣ ತೀರಿಸಲು ಬಳಸಲು ತೀರ್ಮಾನಿಸಿದರು. ತಂದೆ ಮತ್ತು ತಾಯಿಯರ ಹೆಸರಿನಲ್ಲಿ 1978ರಲ್ಲಿ ಮರೂರು ಗ್ರಾಮದಲ್ಲಿ ಸುಸಜ್ಜಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಹೆರಿಗೆ ಆಸ್ಪತ್ರೆಯನ್ನು ನಿರ್ಮಿಸಿದರು.

24 ಗಂಟೆಯೂ ವೈದ್ಯರ ಸೇವೆ ದೊರೆಯಲೆಂಬ ಕಾರಣಕ್ಕೆ ಆಸ್ಪತ್ರೆಯ ಬಳಿಯೇ ವಸತಿ ಗೃಹಗಳನ್ನು ಕಟ್ಟಿಸಿಕೊಟ್ಟರು. ನಾಲ್ಕು ದಶಕ ಕಳೆಯುತ್ತಾ ಬಂದರೂ ಈಗಲೂ ಸಹ ಮರೂರು ಮತ್ತು ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಬಡಜನರಿಗೆ ಈ ಆಸ್ಪತ್ರೆಯು ಆರೋಗ್ಯ ಭಾಗ್ಯವನ್ನು ನೀಡುತ್ತಾ ಬಂದಿದೆ.

ಮರಳಿ ಅಮೆರಿಕಾಗೆ ಹೋದ ನಂತರ ಶ್ರದ್ಧೆಯಿಂದ ತಮ್ಮ ಕಾರ್ಯವನ್ನು ನಿರ್ವಹಿಸುತ್ತಾ ಅಲ್ಲಿನ ಜನರಿಂದಲೂ ಅಷ್ಟೇ ವಿಶ್ವಾಸ ಗಳಿಸಿದ್ದರು. ಅಮೆರಿಕನ್ನರು ಅವರನ್ನು ಮಿಸ್ಟರ್ ಮರೂರು / ಮರೂರು ಹನುಮಾನ್ಎಂದು ಕರೆಯುತ್ತಾರೆ. ಸಮಾನ ಮನಸ್ಕ ಭಾರತೀಯರ ಸಹಕಾರದೊಂದಿಗೆ 1982ರಲ್ಲಿ ಫ್ಲಿಂಟ್ನಲ್ಲಿ ಕಾಶಿವಿಶ್ವನಾಥ ದೇವಾಲಯವನ್ನು ನಿರ್ಮಿಸಿದರು.

ಹತ್ತು ಎಕರೆಯಷ್ಟಿರುವ ಈ ಪ್ರದೇಶದಲ್ಲಿ ಭಾರತೀಯರು ಒಂದೆಡೆ ಸೇರಿ ಪೂಜೆ ಸಲ್ಲಿಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು. ಈ ದೇವಾಲಯವು ಪಶ್ಚಿಮ ಕಾಶಿ ಎಂದೇ ಪ್ರಸಿದ್ದವಾಗಿದೆ. ದೇವಾಲಯದ ಸಮಿತಿಯ ಅಧ್ಯಕ್ಷರಾಗಿ ಹನುಮಂತಯ್ಯನವರು ಸೇವೆ ಸಲ್ಲಿಸಿದ್ದರು.

ಮರೂರಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಸದುದ್ದೇಶದಿಂದ ತಾವು ಕಟ್ಟಿಸಿದ ಆಸ್ಪತ್ರೆಯ ಪಕ್ಕದಲ್ಲೇ 1985ರಲ್ಲಿ ಸುಸಜ್ಜಿತ ಕಟ್ಟಡವುಳ್ಳ ಹಿರಿಯ ಪ್ರಾಥಮಿಕ ಶಾಲೆ (1-7)ಯನ್ನು ತೆರೆದಿದ್ದರು. ಹುಟ್ಟೂರಿಗೆ ಮಾತ್ರವಲ್ಲದೇ 1995ರಿಂದ 2003 ರವರೆಗೆ ಫ್ಲಿಂಟ್ನ ರೋಟರಿ ಸಂಸ್ಥೆಯ ಸಹಯೋಗದೊಡೆನೆ ಕರ್ನಾಟಕದ ಸಾರ್ವಜನಿಕ ಆಸ್ಪತ್ರೆಗಳ ತಾಂತ್ರಿಕ ವರ್ಗದ ಸಿಬ್ಬಂದಿಗೆ ಆಸ್ಪತ್ರೆಯ ಉಪಕರಣ ಸಂರಕ್ಷಣೆ/ನಿರ್ವಹಣೆಯ ಬಗ್ಗೆ ತರಬೇತಿ ಶಿಬಿರ, ಮಾಗಡಿ, ರಾಮನಗರ, ನೆಲಮಂಗಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು ಎರಡೂವರೆ ಲಕ್ಷ ಮಹಿಳೆಯರ ಕ್ಯಾನ್ಸರ್ ತಪಾಸಣೆ/ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿ ಅದಕ್ಕಾಗಿ ಸಂಚಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಮಾಡಿ ಮಹಿಳೆಯರ ಆರೋಗ್ಯ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದರು.

ಫ್ಲಿಂಟ್ನ ರೋಟರಿಯ ಅಂತರರಾಷ್ಟ್ರೀಯ ಸೇವಾ ಸಮಿತಿ ಮತ್ತು ಕಾಶಿ ವಿಶ್ವನಾಥ ದೇವಾಲಯ (ಫ್ಲಿಂಟ್) ವತಿಯಿಂದ 2005ರಲ್ಲಿ ತಮಿಳುನಾಡಿನ ಸುನಾಮಿ ದುರಂತದ ಸಂದರ್ಭದಲ್ಲಿ ಸಂತ್ರಸ್ತರಾದ ಒಂದು ಸಾವಿರ ಕುಟುಂಬಕ್ಕೆ ತಲಾ ನೂರು ಪೌಂಡ್ ಅಕ್ಕಿಯನ್ನು ಒದಗಿಸಿ ಮಾನವೀಯತೆ ಮೆರೆದಿದ್ದರು. ವಿಶ್ವದ ವೈದ್ಯಕೀಯ ಆಪತ್ಕಾಲದ ಪರಿಹಾರ ಕೇಂದ್ರ ಡೆಟ್ರಾಯಿಟ್, ಮಿಚಿಗನ್ನ ಬೋರ್ಡ್ ಆಫ್ ಡೈರೆಕ್ಟರ್ಸ್ ಅವರ ಮೂಲಕ 7,50,000 ಡಾಲರ್ ಮೊತ್ತದ ವೈದ್ಯಕೀಯ ಉಪಕರಣಗಳನ್ನು ಬೆಂಗಳೂರಿನ ವಿಕ್ಟೋರಿಯ ಮತ್ತು ವಾಣಿ ವಿಲಾಸ ಆಸ್ಪತ್ರೆಗಳಿಗೆ ನೆರವು ಕೊಡಿಸುವಲ್ಲಿ ಶ್ರಮಿಸಿದ್ದರು.

ಕಳೆದ 2005 ಮತ್ತು 2006 ರಲ್ಲಿ ಕರ್ನಾಟಕ ಸರ್ಕಾರ ದೊಡನೆ ಕೈ ಜೋಡಿಸಿ ಮಾಗಡಿ ತಾಲ್ಲೂಕಿನ 54 ಶಾಲೆಗಳನ್ನು ದತ್ತು ತೆಗೆದು ಕೊಂಡು ಶೌಚಾಲಯ ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಮಾಡಿಸಿದ್ದರು. ಅಲ್ಲದೇ ಶಾಲಾ ಕಟ್ಟಡ, ಕಾಂಪೌಂಡ್, ಶುದ್ಧ ಕುಡಿಯುವ ನೀರಿಗೂ ಆರ್ಥಿಕ ನೆರವು ಒದಗಿಸಿದ್ದಾರೆ. ಈ ಯೋಜನೆಯನ್ನು ಮಂಡ್ಯದ 4 ಮತ್ತು ರಾಮನಗರ ತಾಲ್ಲೂಕುಗಳ 3 ಶಾಲೆಗಳಿಗೂ ವಿಸ್ತರಿಸಿದ ಹನುಮಂತಯ್ಯನವರು ರೋಟರಿ ಸಂಸ್ಥೆಯ ಮೂಲಕ ಬೆಂಗಳೂರಿನ ಪ್ರೌಢಶಾಲೆಗಳ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೈರ್ಮಲ್ಯೀಕರಣಕ್ಕೆ ನೀರಿನ ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲು ಸಹಕರಿಸಿದ್ದರು.

ಶ್ರೀಯುತರು ವಿಶ್ವದಾದ್ಯಂತ ಸಂಚರಿಸಿ ಎಲ್ಲಾ ದೇಶಗಳ ಸಂಸ್ಕøತಿಯನ್ನು ಅನುಸರಿಸಿ ಅಲ್ಲಿನ ಜನರಿಗೆ ಸೇವೆಸಲ್ಲಿಸಲು ಸಹಕಾರಿಯಾಗುವ ಯೋಜನೆಗಳನ್ನು ರೂಪಿಸಿದ್ದರು. 2012ರಲ್ಲಿ ಇಸ್ಕಾನ್ ಅಮೇರಿಕಾದ ಅಕ್ಷಯ ಪಾತ್ರ ಫೌಂಡೇಷನ್ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಹನುಮಂತಯ್ಯನವರು ಬೆಂಗಳೂರು ಜಿಲ್ಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆಗಳ ಅನುಕೂಲಕ್ಕಾಗಿ ರೋಟರಿ ನೆರವಿನೊಂದಿಗೆ ನಾಲ್ಕು ವಾಹನಗಳನ್ನು ನೀಡಿದ್ದರು.

ಸೇವೆಯನ್ನೇ ಪೂಜೆಯೆಂದು ನಂಬಿದ್ದ ಕಾಯಕಯೋಗಿಗಳೂ, ಯುಗಯೋಗಿಗಳೂ ಆದ ಭೈರವೈಕ್ಯ ಪರಮಪೂಜ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳವರೇ ತಮಗೆ ಆದರ್ಶ, ಸಮಾಜ ಸೇವೆಯಲ್ಲಿ ತಾವು ತೊಡಗಿಕೊಳ್ಳಲು ಪೂಜ್ಯ ಸ್ವಾಮಿಗಳವರೇ ನನಗೆ ಪ್ರೇರಣೆ ಎಂದು ಹನುಮಂತಯ್ಯನವರು ಗುರುಗಳನ್ನು ಸ್ಮರಿಸುತ್ತಿದ್ದರು.
ಹನುಮಂತಯ್ಯನವರು ಕೇವಲ ಭಾರತ ಮಾತ್ರವಲ್ಲದೆ ಮಧ್ಯ ಪೌರ್ವಾತ್ಯ ರಾಷ್ಟ್ರಗಳು, ಲೆಬನಾನ್, ಪ್ಯಾಲಸ್ತೇನ್, ಉಗಾಂಡ, ನೈಜೀರಿಯಾ ರಾಷ್ಟ್ರಗಳು ಸೇರಿದಂತೆ ಆಫ್ರಿಕನ್ ದೇಶಗಳು, ದಕ್ಷಿಣ ಅಮೇರಿಕ, ಬೊಲಿವಿಯ, ಮೆಕ್ಸಿಕೊ, ಕೆರೆಬಿಯನ್ ದ್ವೀಪಗಳು ಹೈಟಿ, ಕೆನಡ ಮತ್ತು ಅಮೆರಿಕಾದಲ್ಲಿರುವ ಭಾರತದಿಂದ ವಲಸೆ ಹೋದ ಜನರ ಪಾಲಿಗೆ ಸಂಪರ್ಕ ಸೇತುವೆಯಾಗಿದ್ದರು.

ಉತ್ತರ ಅಮೇರಿಕ ಮತ್ತು ಕೆನಡಾದಲ್ಲಿನ ಹಿಂದೂ ದೇವಾಲಯಗಳ ಸಮಿತಿಗಳ ಸಂಘಟಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಅವರಲ್ಲಿ ಕ್ರಿಯಾಶಕ್ತಿಯನ್ನು ತುಂಬಲು ಸಹಕರಿಸಿದ್ದಾರೆ. ಮರೂರು ಹನುಮಂತಯ್ಯನವರು ತಮ್ಮದೇ ಆದ ಟ್ರಾನ್ಸ್ ಎನ್ವಿರಾನ್ಮೆಂಟಲ್ ಇಂಜಿನಿಯರ್ಸ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ಅಲ್ಲಿನ ಖ್ಯಾತ ಬಿಲ್ಡರ್ ಮತ್ತು ಲ್ಯಾಂಡ್ ಡೆವಲಪರ್ ಆಗಿ ಗುರುತಿಸಿಕೊಂಡಿದ್ದರು.

2015 ರಲ್ಲಿ ಫ್ಲಿಂಟ್ನ ಪಶ್ಚಿಮ ಕಾಶಿ ವಿಶ್ವನಾಥ ದೇವಾಲಯದ ನವೀಕರಣ ಕಾರ್ಯವನ್ನು ಕೈಗೊಂಡು ಸುಮಾರು 65 ಅಡಿ ಎತ್ತರದ ರಾಜಗೋಪುರ ನಿರ್ಮಿಸಿ ಅದರೊಳಗೆ 126 ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅಮೇರಿಕನ್ನರನ್ನೇ ಬೆರಗುಗೊಳಿಸಿದ್ದರು. ರೋಟರಿ ಸಂಸ್ಥೆ ಮತ್ತು ವಿಶ್ವ ಸಮುದಾಯ ಸೇವಾ ಸಂಸ್ಥೆಗಳ ಮೂಲಕ ಬಡಜನರಿಗೆ ಸಹಾಯ ಮಾಡುತ್ತಿರುವ ಮರೂರು ಹನುಮಂತಯ್ಯನವರ ಸೇವೆಯನ್ನು ಪರಿಗಣಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು 2008ನೇ ಸಾಲಿನ ಚುಂಚಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿತ್ತು.

Articles You Might Like

Share This Article