ಬ್ರೇಕಿಂಗ್: PU ಕಾಲೇಜುಗಳಲ್ಲಿ ಸಾಮೂಹಿಕ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ

Social Share

ಬೆಂಗಳೂರು, ಆ.18- ಇನ್ನು ಮುಂದೆ ಸರ್ಕಾರಿ, ಅನುದಾನ, ಅನುದಾನ ರಹಿತ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆಯ ವೇಳೆಯಲ್ಲಿ ರಾಷ್ಟ್ರಗೀತೆ ಹಾಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ (1-12) ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು, ಸಾಮೂಹಿಕ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿಲ್ಲದೆ ಹೋದರೆ ಶಾಲಾ ಕೊಠಡಿಗಳಲ್ಲೆ ರಾಷ್ಟ್ರಗೀತೆ ಹಾಡಿಸುವಂತೆ ತಿಳಿಸಿದೆ.

ಜೊತೆಗೆ ಯಾವುದೇ ಕಾರಣಕ್ಕೂ ರಾಷ್ಟ್ರಗೀತೆಗೆ ಅಪಚಾರ ಆಗದಂತೆ ನೋಡಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಕರ್ನಾಟಕದ ಕೆಲವು ಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡಿಸದಿರುವ ವಿಷಯ ಬಹಿರಂಗವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯ ಮಾಡಲು ನಿರ್ಧರಿಸಿದೆ.

ಹೀಗಾಗಿ ಮದರಸಗಳು ಸೇರಿದಂತೆ ಪ್ರತಿಯೊಂದು ಶಾಲೆಗಳು ಇನ್ನು ಮುಂದೆ ರಾಷ್ಟ್ರಗೀತೆಯನ್ನು ಹಾಡುವುದು ಕಡ್ಡಾಯವಾಗಲಿದೆ. ಈ ಕುರಿತ ಆದೇಶ ಇನ್ನೆರಡು ದಿನಗಳೊಳಗಾಗಿ ಹೊರಬೀಳುವ ಸಾಧ್ಯತೆಯಿದ್ದು, ಈ ಆದೇಶವನ್ನು ಉಲ್ಲಂಘಿಸಿದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಶಾಲೆಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ವೇಳೆ ಎಲ್ಲಾ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹಾಗೂ ರಾಷ್ಟ್ರದ ಬಗ್ಗೆ ಗೌರವದ ಭಾವನೆಗಳನ್ನು ಮೂಡಿಸಬೇಕು. ಮುಂಜಾನೆಯ ಸಾಮೂಹಿಕ ಪ್ರಾರ್ಥನೆಯ ಸಂದರ್ಭ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡಿಸುವ ಸಂಪ್ರದಾಯ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರೂಢಿಯಲ್ಲಿದೆ. ಆದರೆ, ಬೆಂಗಳೂರಿನ ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಷ್ಟ್ರಗೀತೆಯನ್ನು ಪ್ರತಿದಿನ ಹಾಡಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮೂಲಕ ಈ ಆದೇಶ ಹೊರಡಿಸಿದೆ.

ಸಂವಿಧಾನದಲ್ಲಿ ಹೇಳಲಾಗಿರುವ ನಾಗರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸಂವಿಧಾನವನ್ನು ಅನುಸರಿಸುವುದು ಹಾಗೂ ಸಂವಿಧಾನದ ಆದರ್ಶಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದಕ್ಕೆ ಸಂಬಂಧಿಸಿದಂತಹ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿರುತ್ತದೆ. ಒಂದೊಮ್ಮೆ ಆದೇಶ ಸಮರ್ಪಕವಾಗಿ ಪಾಲನೆ ಆಗದಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರವು ರಾಜ್ಯ ಸರ್ಕಾರಕ್ಕೆ ಇರಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಾದ ಬಿಷಪ್ ಕಾಟನ್, ಬಾಲ್ಡ್‍ವಿನ್, ಸೆಂಟ್ ಜೋಸೆಫ್ ಶಾಲೆಗಳು ರಾಷ್ಟ್ರಗೀತೆ ಹಾಡಿಸದೇ ಇರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಇದರನುಸಾರ ಎಲ್ಲಾ ಶಾಲೆಗಳಲ್ಲಿ ಮುಂಜಾನೆ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.

Articles You Might Like

Share This Article