ಬೆಂಗಳೂರು, ಜ.5- ಕೊರೊನಾ ರಾಜ್ಯಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಂಇಎಸ್ ನಿಷೇಧಕ್ಕೆ ಆಗ್ರಹಿಸಿ ಜ.22ರಂದು ಕನ್ನಡ ಒಕ್ಕೂಟ ಹಮ್ಮಿಕೊಂಡಿದ್ದ ಕರ್ನಾಟಕ ಬಂದ್ ಬದಲಾಗಿ ಬೃಹತ್ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ.
ಕನ್ನಡ ಒಕ್ಕೂಟದ ಮುಖಂಡರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಕೆ.ಆರ್.ಕುಮಾರ್, ಮಂಜುನಾಥ್ ದೇವು, ದೀಪಕ್, ಗಿರೀಶ್‍ಗೌಡ ಮುಂತಾದವರ ನೇತೃತ್ವದಲ್ಲಿ ಇಂದು ಸಭೆ ನಡೆಸಿ ಉದ್ದೇಶಿತ ಬಂದ್ ಬದಲಾಗಿ ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕಚೇರಿಗಳ ಎದುರು ಪ್ರತಿಭಟನಾ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು. ಮೇಕೆದಾಟು, ಮಹದಾಯಿ ಯೋಜನೆ ಜಾರಿಗೊಳಿಸುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು. ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಂದು ಹೇಳಿದರು.
ಕೊರೊನಾ ನಿಯಂತ್ರಣದ ನೆಪದಲ್ಲಿ ಸರ್ಕಾರ ಕೈಗೊಂಡಿರುವ ವೀಕೆಂಡ್ ಕಫ್ರ್ಯೂವಿನಂತಹ ಕ್ರಮಗಳು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದು ಅತ್ಯಂತ ಖಂಡನೀಯವಾಗಿದೆ. ಲಾಕ್‍ಡೌನ್, ಸೀಲ್‍ಡೌನ್ ಮುಂತಾದ ಕ್ರಮಗಳಿಂದ ಜನರ ಬದುಕು ಮತ್ತಷ್ಟು ದುಸ್ತರವಾಗುತ್ತದೆ. ಅದರ ಬದಲು ಆರೋಗ್ಯ ಸೇವೆ ನೀಡಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು. ಕಾಂಗ್ರೆಸ್ ಕೈಗೊಂಡಿರುವ ಪಾದಯಾತ್ರೆ ರಾಜಕೀಯ ಪ್ರೇರಿತ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
