ಬೆಂಗಳೂರು,ಜು.30- ಹಿಂದೂ ಧರ್ಮದ ರಕ್ಷಣೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಗೆ ಇದೀಗ ಪಕ್ಷದ ಕಾರ್ಯಕರ್ತರ ಕಗ್ಗೊಲೆ ಹಾಗೂ ಸಾಮೂಹಿಕ ರಾಜೀನಾಮೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.
ಕಮಲಪಡೆಯನ್ನು ಎಷ್ಟರ ಮಟ್ಟಿಗೆ ನಿದ್ದೆಗೆಡುವಂತೆ ಮಾಡಿದೆ ಎಂದರೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪಕ್ಷದ ಸಾಮಾಜಿಕ ಮಾಧ್ಯಮ ನಿರ್ವಹಣೆ ಸೇರಿದಂತೆ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆ ನೀಡುತ್ತಿರುವುದು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಎಂಬ ಆತಂಕ ಎದುರಾಗಿದೆ.
ಕಾರ್ಯಕರ್ತರ ಪಕ್ಷವೆಂದು ಹೇಳಿಕೊಂಡು ರಾಜ್ಯದಲ್ಲಿ ಎರಡನೇ ಬಾರಿಗೆ ಅಕಾರಕ್ಕೆ ಬಂದ ಕೇಸರಿ ಪಡೆಗೆ ನಿಷ್ಠಾವಂತ ಕಾರ್ಯಕರ್ತರ ಸಾಲು ಸಾಲು ರಾಜೀನಾಮೆ ನೀಡಿ ಸ್ವಪಕ್ಷದ ವಿರುದ್ದವೇ ಬಹಿರಂಗ ಸಮರ ಸಾರಿರುವುದು ಅಕ್ಷರಶಃ ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.
ರಾಜ್ಯದಲ್ಲಿ ಪಕ್ಷ ಅಕಾರಕ್ಕೆ ಬಂದರೆ ಮೂಲಭೂತವಾದಿ ಸಂಘಟನೆಗಳನ್ನು ಬೇರು ಸಮೇತ ಕಿತ್ತು ಹಾಕುವುದಾಗಿ ಅಬ್ಬರಿಸಿ ಚುನಾವಣೆಯಲ್ಲಿ ಭರ್ಜರಿ ಫಸಲು ತೆಗೆದಿದ್ದ ಕೇಸರಿ ಕಲಿಗಳಿಗೆ ಕಾರ್ಯಕರ್ತರ ರಾಜೀನಾಮೆ ಹಾಗೂ ತಿರುಗಿ ಬಿದ್ದರುವುದು ಕಮಲದ ಪರಿಸ್ಥಿತಿ ವಿಲವಿಲ ಎನ್ನುವಂತಾಗಿದೆ.
ಬೆಂಗಳೂರಿನ ಡಿಜಿಹಳ್ಳಿ- ಕೆಜಿಹಳ್ಳಿಯಿಂದ ಆರಂಭವಾಗಿ ಇದೀಗ ಪ್ರವೀಣ್ ನಾಟ್ಟಾರ್ ಕೊಲೆ ಕಾರ್ಯಕರ್ತರನ್ನು ತಿರುಗಿ ಬೀಳುವಂತೆ ಮಾಡಿರುವುದು, ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯ ಹಾದಿಯನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಚುನಾವಣೆ ಹತ್ತಿರ ಇರುವಾಗಲೇ ಆಗಿರುವ ಈ ಹೊಡೆತವನ್ನು ಯಾವ ರೀತಿಯಲ್ಲಿ ಅವರು ಸರಿಪಡಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣರಾರು ಎನ್ನುವುದನ್ನು ನಾಯಕರು ಮನನ ಮಾಡಿಕೊಳ್ಳಬೇಕಿದೆ.
ಹಿಂದುತ್ವದ ಜಪ ಮಾಡುತ್ತಾ ಅಕಾರಕ್ಕೆ ಬಂದ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ರಕ್ಷಣೆ ಸಿಕ್ಕಲ್ಲ, ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಮುಗಿಸಲಾಗುತ್ತಿದೆ ಎನ್ನುವುದಾದರೆ ನಾಯಕರು ಏನು ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರೇ ಕೇಳುತ್ತಿದ್ದಾರೆ.
ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೂ ಹೆಚ್ಚಿನ ಸ್ಥಾನ ಪಡೆಯಬೇಕಾದರೆ ಅಲ್ಲಿ ಕಾರ್ಯಕರ್ತರು ಬರೀ ಬೆವರು ಹರಿಸಿರಲಿಲ್ಲ ರಕ್ತ ಹರಿಸಿದ್ದರು. ಹಿಂದೂ ಪರ ಸಂಘಟನೆಗಳು ನಮ್ಮದೇ ಪಕ್ಷ ಅಕಾರಕ್ಕೆ ಬಂದರೆ ನಾವು ನೆಮ್ಮದಿಯಾಗಿ ಬದುಕಬಹುದು ಎಂಬ ನಂಬಿಕೆಯದ್ದವು.
ಹಿಂದೂ ಕಾರ್ಯಕರ್ತರನ್ನು ಹತ್ಯೆಗೈದ ಹಂತಕರಿಗೆ ಕಠಿಣ ಶಿಕ್ಷೆಯಾಗಬಹುದು. ಮತಾಂಧ ಶಕ್ತಿಗಳನ್ನು ಮಟ್ಟಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದವು. ಆದರೆ ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿ ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ನೀಡಿದ್ದ ಭದ್ರತೆಯನ್ನೇ ವಾಪಸ್ ಪಡೆದರು ಆಗಲೂ ವಿರೋಧ ವ್ಯಕ್ತವಾಗಲಿಲ್ಲ.
ಇದರ ನಡುವೆ ಹಿಂದೂ ಕಾರ್ಯಕರ್ತರ ಹತ್ಯೆಯಾಯಿತು. ಆಗ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದನ್ನು ಜನ ನಂಬಿದರು. ಕಳೆದ ಆರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಜನ ಆಕ್ರೋಶಗೊಂಡರು. ಹರ್ಷನ ಮನೆಗೆ ತೆರಳಿದ ನಾಯಕರು ಮತ್ತೆ ಕಠಿಣ ಕ್ರಮಗಳ ಭರವಸೆ ನೀಡಿದರು.
ಇದೇ ವೇಳೆ ಒಂದಷ್ಟು ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು. ಆದರೆ ಯಾವಾಗ ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ರಾಜ್ಯದ ಜನ ಅದರಲ್ಲೂ ಆಡಳಿತರೂಢ ಬಿಜೆಪಿಯ ಕಾರ್ಯಕರ್ತರೇ ಆಕ್ರೋಶಗೊಂಡಿದ್ದರು.
ಇಷ್ಟಕ್ಕೂ ಬೇರೆಲ್ಲ ಪಕ್ಷದ ಕಾರ್ಯಕರ್ತರನ್ನು ನೋಡುವಷ್ಟು ಸುಲಭವಾಗಿ ನಾವು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ನೋಡುವುದಕ್ಕಾಗುವುದಿಲ್ಲ. ಅದಕ್ಕೆ ಕಾರಣವೂ ಇದೆ. ಇಲ್ಲಿರುವ ಪ್ರತಿಯೊಬ್ಬ ಕಾರ್ಯಕರ್ತ ಹಿಂದುತ್ವ, ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತಾನೆ ಮತ್ತು ಪಕ್ಷಕ್ಕೆ ಬದ್ಧನಾಗಿರುತ್ತಾನೆ.
ತಳಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತ ಹಿಂದೂಪರ ಸಂಘಟನೆಯ ಮೂಲಕ ಬಿಜೆಪಿಯನ್ನು ಬೆಳೆಸಲು ಹಗಲಿರುಳು ತಮ್ಮದೇ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅದು ಯಾವುದೇ ರಾಜಕೀಯ ನಾಯಕರ ಫಲಾಪೇಕ್ಷೆಯಿಲ್ಲದೆ ತನ್ನದೇ ಖರ್ಚಿನಲ್ಲಿ ಪಕ್ಷವನ್ನು ಸಂಘಟಿಸುತ್ತಾನೆ.
ಹೀಗಿರುವಾಗ ಸಂಘಟನೆ ಮತ್ತು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತನ ಬಲಿದಾನವಾಗಿದೆ ಎಂಬುದು ಗೊತ್ತಾದಾಗ ಅಲ್ಲಿಗೆ ಪಕ್ಷದ ಯಾವುದೇ ನಾಯಕರು ಹೋಗೋದಿಲ್ಲ ಎನ್ನುವುದಾದರೆ ನಿಷ್ಠಾವಂತ ಕಾರ್ಯಕರ್ತರು ಆಕ್ರೋಶಗೊಳ್ಳದೆ ಇರುತ್ತಾರಾ? ಎನ್ನುವುದು ಬಹುತೇಕರ ಆಕ್ರೋಶ.
ಕಳೆದ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೂ ಹೆಚ್ಚಿನ ಸ್ಥಾನ ಪಡೆಯಬೇಕಾದರೆ ಅಲ್ಲಿ ಕಾರ್ಯಕರ್ತರು ಬರಿ ಬೆವರು ಹರಿಸಿರಲಿಲ್ಲ ರಕ್ತ ಹರಿಸಿದ್ದರು. ಹಿಂದೂ ಪರ ಸಂಘಟನೆಗಳು ನಮ್ಮದೇ ಪಕ್ಷ ಅಕಾರಕ್ಕೆ ಬಂದರೆ ನಾವು ನೆಮ್ಮದಿಯಾಗಿ ಬದುಕಬಹುದು ಎಂಬ ನಂಬಿಕೆಯಲ್ಲಿದ್ದರು.
ಹಿಂದೂ ಕಾರ್ಯಕರ್ತರನ್ನು ಹತ್ಯೆಗೈದ ಹಂತಕರಿಗೆ ಕಠಿಣ ಶಿಕ್ಷೆಯಾಗಬಹುದು. ಮತಾಂಧ ಶಕ್ತಿಗಳನ್ನು ಮಟ್ಟಹಾಕಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿ ಜೀವ ಬೆದರಿಕೆ ಇರುವ ಹಿಂದೂ ನಾಯಕರಿಗೆ ನೀಡಿದ್ದ ಭದ್ರತೆಯನ್ನೇ ವಾಪಸ್ ಪಡೆದರು. ಆಗಲೂ ವಿರೋಧ ವ್ಯಕ್ತವಾಗಲಿಲ್ಲ. ಈಗ ಮೊದಲ ಬಾರಿಗೆ ಕಾರ್ಯಕರ್ತರ ವಿರೋಧ ಎದುರಿಸುವಂತಾಗಿದೆ.