ತುಮಕೂರು.ಜು.14-ಮಟ್ಕಾದಂಧೆ ನಿಯಂತ್ರಿಸಲು ವಿಫಲವಾದ ಪಾವಗಡ ಠಾಣೆ ಇನ್ ಸ್ಪೆಕ್ಟರ್ ಲಕ್ಷ್ಮೀಕಾಂತ್ ಅವರನ್ನು ಅಮಾನತುಗೊಳಿಸಿ ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ಆದೇಶಿಸಿದ್ದಾರೆ.
ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕಾದ ಪೊಲೀಸ್ ಸಿಬ್ಬಂದಿಯೇ ಮಟ್ಕಾ ದಂಧೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು, ಇತ್ತೀಚೆಗೆ ಸಾರ್ವಜನಿಕವಾಗಿ ಮಟ್ಕಾ ದಂಧೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಮಟ್ಕಾ ದಂಧೆಗೆ ಸಹಕರಿಸಿದ್ದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ ಗಳನ್ನು ಇತ್ತೀಚೆಗೆ ಅಮಾನತು ಮಾಡಲಾಗಿತ್ತು, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಈಗ ಪಾವಗಡ ನಗರ ಠಾಣೆ ಪಿಐ ಲಕ್ಷ್ಮೀಕಾಂತ್ ಅವರನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದೆ.
ಖಡಕ್ ಎಚ್ಚರಿಕೆ: ಎಸ್ಪಿ ರಾಹುಲ್ ಕುಮಾರ್ ಶಹಪೂರವಾಡ್ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಟ್ಕಾ ನಿಯಂತ್ರಣಕ್ಕೆ ಕಡಿವಾಣ ಹಾಕಿದ್ದು, ಮಟ್ಕಾ ಕಿಂಗ್ ಪಿನ್ ಅಶ್ವತ್ಥಪ್ಪ ಅವರನ್ನು ಗಡಿಪಾರು ಮಾಡಲಾಗಿತ್ತು.
ಅಶ್ವತ್ಥಪ್ಪ ಗಡೀಪಾರು ಮಾಡಿದ್ದರೂ ಸಹ ಪಾವಗಡದಲ್ಲಿ ಮಟ್ಕಾ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದ ಬಗ್ಗೆ ಕಣ್ಣಿಟ್ಟಿದ್ದ ಪೊಲೀಸರು, ತಂತ್ರಜ್ಞಾನದ ಸಹಾಯದೊಂದಿಗೆ ಮಟ್ಕಾ ದಂಧೆಕೋರರಿಗೆ ಎಡೆಮುರಿ ಕಟ್ಟಲು ಯಶಸ್ವಿಯಾಗಿದ್ದರು.
ಇತ್ತಿಚೆಗೆ ಮಟ್ಕಾ ಮತ್ತೆ ಬೆಳಕಿಗೆ ಬಂದಿದ್ದು, ಮಟ್ಕಾ ದಂಧೆಗೆ ಪೊಲೀಸರೇ ಸಹಕಾರ ನೀಡುತ್ತಿರುವ ದೂರುಗಳು ಕೇಳಿಬಂದಿದ್ದವು, ಮಟ್ಕಾ ದಂಧೆಗೆ ಸಹಕರಿಸಿದ್ದ ಪೊಲೀಸ್ ಪೇದೆಗಳ ಆಡಿಯೋ ವೈರಲ್ ಸಹ ಆಗಿತ್ತು, ಈ ಹಿನ್ನೆಲೆ ಇಲಾಖೆ ವಿಚಾರಣೆ ನಡೆಸಿ, ಪೊಲೀಸ್ ಇನ್ ಸ್ಪೆಕ್ಟರ್ ಲಕ್ಷ್ಮೀಕಾಂತ್ ಅವರನ್ನು ಅಮಾನತುಗೊಳಿಸಲಾಗಿದ್ದು, ಈವರೆಗೆ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.