ಬೆಂಗಳೂರು,ಆ.21- ವೀರಶೈವ ಲಿಂಗಾಯಿತ ಧರ್ಮದ ವಿಚಾರವಾಗಿ ನನ್ನ ಮತ್ತು ಎಂ.ಬಿ.ಪಾಟೀಲ್ ಮಧ್ಯೆ ಯಾವುದೇ ಸಂಘರ್ಷಗಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲ್ ಮತ್ತು ನನ್ನ ನಡುವೆ ಉತ್ತಮ ಸಂಬಂಧವಿದೆ. ಇಬ್ಬರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ಪೈಪೋಟಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೀರಶೈವ ಲಿಂಗಾಯಿತ ಧರ್ಮದ ವಿಚಾರವಾಗಿ ಈ ಹಿಂದೆಯೂ ನಾನು ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇನೆ. ಅವು ಅಖಿಲ ಭಾರತ ವೀರಶೈವ ಮಹಾಸಭಾದ ಅಭಿಪ್ರಾಯಗಳು ಕೂಡ ಆಗಿವೆ. ನಾನು ಈಗಲೂ ಅದಕ್ಕೆ ಬದ್ದನಾಗಿದ್ದೇನೆ ಎಂದಿದ್ದಾರೆ.
ಎಂ.ಬಿ.ಪಾಟೀಲ್ ಮತ್ತು ನನ್ನ ನಡುವೆ ಈ ವಿಷಯವಾಗಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅದನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಜಟಾಪಟಿ ಮಾಡುವ ಅಗತ್ಯವಿಲ್ಲ ಎಂದರು. ಕಾಂಗ್ರೆಸ್‍ನಲ್ಲಿ ನನಗೆ ಯಾವುದೇ ಸ್ಥಾನಮಾನ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಅವರು ಸ್ಪಷ್ಟನೆ ನೀಡಿದೆ.