ಬೆಂಗಳೂರು, ಜ.26- ಕೆಪಿಸಿಸಿ ಪ್ರಚಾರ ಸಮಿತಿಗೆ ಮಾಜಿ ಸಚಿವ ಎಂ.ಬಿ.ಪಾಟೀಲ್ ರನ್ನು ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರ ವಹಿಸಿಕೊಂಡು ಕೆಲಸ ಆರಂಭಿಸುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ.
ಎಂ.ಬಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಚರ್ಚೆಗಳು ನಡೆದಿದ್ದವು. ಲಿಂಗಾಯಿತ-ವೀರಶೈವ ಧರ್ಮಕ್ಕೆ ಸ್ವಾಯತ್ತ ಸ್ಥಾನ ಸಿಗಬೇಕು ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನಡೆದ ಹೋರಾಟದ ಮುಂಚೂಣಿ ನಾಯಕತ್ವವನ್ನು ಎಂ.ಬಿ.ಪಾಟೀಲ್ ವಹಿಸಿದ್ದರು.
ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಎಂ.ಬಿ.ಪಾಟೀಲ್ ರಿಗೆ ಈಗ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಎಸ್.ಆರ್.ಪಾಟೀಲ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎಂ.ಬಿ.ಪಾಟೀಲ್ ಅವರ ಸಹೋದರಿಗೆ ಟಿಕೆಟ್ ನೀಡಿದ ಕಾಂಗ್ರೆಸ್ ಎಸ್.ಆರ್.ಪಾಟೀಲರಿಗೆ ಅವಕಾಶ ನಿರಾಕರಿಸಿತ್ತು.
ಇದರಿಂದ ಲಿಂಗಾಯಿತ ಸಮುದಾಯ ಅಸಮದಾನ ಹೊಂದಬಹುದು ಎಂಬ ಆತಂಕದಲ್ಲಿ ಎಂ.ಬಿ.ಪಾಟೀಲರಿಗೆ ಮಹತ್ವದ ಜವಾಬ್ದಾರಿ ನೀಡಿದೆ. ಕೆಪಿಸಿಸಿಯಲ್ಲಿ ಪ್ರಚಾರ ಸಮಿತಿ ಸ್ವತಂತ್ರ ಹುದ್ದೆಯಾಗಿದ್ದು, ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರನ್ನು ಹೊರತು ಪಡಿಸಿದರೆ ಮೂರನೇ ಮಹತ್ವದ ಹುದ್ದೆಯಾಗಿದೆ. ಅದಕ್ಕೆ ಎಂ.ಬಿ.ಪಾಟೀಲರನ್ನು ನೇಮಿಸುವ ಮೂಲಕ ಲಿಂಗಾಯಿತ ಸಮುದಾಯವನ್ನು ಸಮಾಧಾನ ಪಡಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗುತ್ತಿದೆ.
