ಸಾರ್ವಕರ್ ಫೋಟೋ ಏಕೆ..? ನಮ್ಮ ರಾಜ್ಯದ ಮಹನೀಯರಿಲ್ಲವೆ..? : ಎಂ.ಬಿ.ಪಾಟೀಲ್

Social Share

ಬೆಂಗಳೂರು,ಆ.24- ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ನಮ್ಮ ರಾಜ್ಯದ ನಾಯಕರು ಹಾಗೂ ದಾರ್ಶನಿಕರ ಫೋಟೋ ಇಟ್ಟು ಗಣಪತಿ ಪೂಜೆ ಮಾಡಿ, ಅದರ ಬದಲು ಸಾರ್ವಕರ್ ಫೋಟೋ ಏಕೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಕರ್ ಯಾಕೆ ನಮ್ಮಲ್ಲಿ ಹಲವು ಮಹನೀಯರು ಇಲ್ಲವೇ? ಸಾರ್ವಕರ್ ಬದಲಾಗಿ ಕಿತ್ತೂರು ಚೆನ್ನಮ್ಮನವರ ಫೋಟೊ ಹಾಕಿ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಸುರಪುರದ ನಾಯಕರು, ಕೆಂಪೇಗೌಡರ ಫೋಟೊ ಇಟ್ಟು ಪೂಜೆ ಮಾಡಿ ಎಂದು ಸಲಹೆ ನೀಡಿದರು.

ನಾನು ಮೊದಲ ರಾಜ್ಯದಲ್ಲಿ ಹಂತದ ಪ್ರವಾಸ ಮಾಡಿದ್ದೇನೆ. ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದೇನೆ. ಹೋದ ಕಡೆ ಮಠಗಳಿಗೆ ಭೇಟಿ ನೀಡಿದ್ದೇನೆ. ಚಿತ್ತಾಪುರ ಮಠ, ಶರಣ ಬಸವೇಶ್ವರಮಠ, ಹುಬ್ಬಳ್ಳಿ ಸಿದ್ಧಾರೂಡ ಮಠ, ಧಾರವಾಡದ ಮುರುಘಾಮಠಕ್ಕೂ ಭೇಟಿ ನೀಡಿದ್ದೇನೆ.

ದಾವಣಗೆರೆಯಲ್ಲಿರುವ ಸಿರಿಗೆರೆ ಮಠ, ಬೋವಿ, ಲಂಬಾಣಿ ಸಮುದಾಯದ ಮಠಗಳಿಗೆ, ಮಾದಾರ ಚೆನ್ನಯ್ಯ ಗುರುಪೀಠ, ಚಿತ್ರದುರ್ಗದ ಮುರುಘಾಮಠ, ಹರಿಹರದ ಕಾಗಿನೆಲೆ ಮಠಕ್ಕೆ ಭೇಟಿ ನೀಡಿದ್ದೇನೆ. ಕೇವಲ ಲಿಂಗಾಯಿತ ಮಠಗಳಿಗೆ ಭೇಟಿ ನೀಡುತ್ತಿದ್ದೇನೆ ಎಂಬುದು ಸುಳ್ಳು ಆರೋಪ ಎಂದರು.

ಎಲ್ಲಾ ಉಪಪಂಗಡಗಳಿಗೆ ಅನುಕೂಲ ಆಗಬೇಕು, ಎಲ್ಲರಿಗೆ ಮೀಸಲಾತಿ ಸಿಗಬೇಕು, ಬರಿ ನನಗೆ, ಶಾಮನೂರಿಗಷ್ಟೇ ಅಲ್ಲ, ಇವತ್ತು ಲಿಂಗಾಯತ ಸಮುದಾಯ ಉಪಪಂಗಡ ಆಗಿದೆ ಎಂದು ಅವರು ಧರ್ಮ ಸಂಘರ್ಷ ಸಂಬಂಧಪಟ್ಟಂತೆ ಉತ್ತರ ನೀಡಿದರು.

ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದರತ್ತ ಗಮನಹರಿಸಿಲ್ಲ. ಮಂಡಕ್ಕಿ ಮೇಲೂ ಜಿಎಸ್‍ಟಿ ಹಾಕಿದ್ದಾರೆ. ಸತ್ತವರನ್ನು ಸುಡುವ ಚಿತಾಗಾರದ ಮೇಲೂ ಜಿಎಸ್‍ಟಿ ಹಾಕಲಾಗಿದೆ. ಇನ್ಯಾವುದಕ್ಕೆ ಇವರು ತೆರಿಗೆ ಹಾಕುವುದನ್ನು ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಈ ಮೊದಲು ನಮ್ಮ ರಾಜ್ಯ ಅಭಿವೃದ್ಧಿಯಲ್ಲಿ ನಂಬರ್ ಒನ್ ಇತ್ತು. ಬಿಜೆಪಿಯವರು ಅದನ್ನು ಹದಗೆಡಿಸಿದ್ದಾರೆ. ಬೇರೆಡೆಯಿಂದ ಶಿಕ್ಷಣಕ್ಕೆ ಇಲ್ಲಿಗೆ ಬರುತ್ತಿದ್ದರು. ಕೋಟ್ಯಂತರ ಉದ್ಯೋಗ ಸೃಷ್ಟಿ ಇಲ್ಲಿ ಆಗುತ್ತಿತ್ತು. ಈಗ ರಾಜ್ಯವನ್ನು ಕೊನೆಯ ಸ್ಥಾನಕ್ಕೆ ಕೊಂಡೊಯಿದ್ದಾರೆ. ಅಭಿವೃದ್ಧಿ ಮರೆತು ಉತ್ತರಪ್ರದೇಶದ ಮಾದರಿ ಎಂದು ಕೋಮುದ್ವೇಷ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳನ್ನು ಭೇಟಿ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯುಕ್ತಿಕ ವಿಚಾರ. ಅವರಿಬ್ಬರು ಖಾಸಗಿ ವಿಚಾರ ಮಾತನಾಡಿದ್ದಾರೆ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಸರ್ಕಾರದ ಮೇಲೆ ಶೇ. 40ರಷ್ಟು ಭ್ರಷ್ಟಾಚಾರದ ಆರೋಪ ಮಾಡಿ, ಗುತ್ತಿಗೆದಾರರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಪ್ರಧಾನಿಗಳು ಬೇರೆಯವರ ಮೇಲೆ ಸಿಬಿಐ, ಜಾರಿ ನಿದೇರ್ಶನಾಲಯ, ಆದಾಯ ತೆರಿಗೆ ದಾಳಿ ಮಾಡಿಸುತ್ತಾರೆ. ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್‍ಗಾಂಧಿ ,ಸೋನಿಯಾ ಗಾಂಧಿ ಅವರ ಮೇಲೂ ದಾಳಿಗಳಾಗಿವೆ. ಆದರೆ ಗುತ್ತಿಗೆದಾರರ ಸಂಘದ ಪತ್ರ ಆಧರಿಸಿ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

Articles You Might Like

Share This Article