ಹುಣಸೂರು, ಜು.31- ತಾಲೂಕಿನಲ್ಲಿ ಹೈನುಗಾರಿಕೆ ಹಾಗೂ ಪತ್ತಿನ ಸಹಕಾರ ಸಂಘಗಳ ಅಭಿವೃದ್ದಿಗೆ ಪೂರಕವಾಗಿ ಮೈಮುಲ್ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಸೇರಿ ಕಾರ್ಯ ನಿರ್ವಹಿಸಿದ್ದರ ಪರಿಣಾಮ ಇಂದು ಸಹಕಾರಿ ಕ್ಷೇತ್ರ ಪ್ರಗತಿಯತ್ತ ಸಾಗುವ ಜೊತೆಗೆ ಸಹಕಾರಿಗಳ ಬದುಕು ಹಸನಾಗಿದೆ ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಆಯೋಜಿಸಿದ್ದ ಸಹಕಾರ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಾ.ಕೃ.ಪ.ಸ.ಸಂಘಗಳ ನೂತನ ಕಟ್ಟಡ, 200ನೇ ಡೇರಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತೀ ಹೆಚ್ಚು ಡೇರಿಗಳನ್ನು ಹೊಂದಿರುವ ತಾಲೂಕು ಇದಾಗಿದ್ದು, ಇದಕ್ಕಾಗಿ ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ಅವರ ತಂಡ ಅಪಾರ ಶ್ರಮ ಹಾಕಿದೆ ಎಂದು ಪ್ರಶಂಸಿಸಿ, ಕೆ.ಎಂ.ಎಫ್, ಮೈಮುಲ್, ಎಂಸಿಡಿಸಿಸಿ ಬ್ಯಾಂಕ್ ಮೂಲಕ ಸಾಕಷ್ಟು ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
13 ಸಾವಿರ ಕುಟುಂಬಕ್ಕೆ ಸಾಲಸೌಲಭ್ಯ ವಿಸ್ತರಣೆ : ಸರಕಾರ ಹಾಗೂ ಶಾಸಕ-ಸಂಸದರ ನಿಧಿಯಿಂದ ಡೇರಿ-ಸೊಸೈಟಿಗಳ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುದಾನ ನೀಡುತ್ತಿಲ್ಲ. ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಅಪೆಕ್ಸ್ ಬ್ಯಾಂಕ್‍ನಿಂದ ಮುಂದೆ ಪ್ರತಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಕನಿಷ್ಟ 5 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ.
ಹುಣಸೂರು ತಾಲೂಕಿನ 27 ಪತ್ತಿನ ಸಹಕಾರ ಸಂಘಗಳಿಗೆ ಹಿಂದೆ ಕೇವಲ 45 ಕೋಟಿರೂ ಸಾಲ ನೀಡಲಾಗಿತ್ತು, 10 ಸಾವಿರ ಕುಟುಂಬಗಳಿಗೆ ಮಾತ್ರ ಅನುಕೂಲವಾಗಿತ್ತು, ತಾವು ಅಧ್ಯಕ್ಷರಾದ ನಂತರ 145 ಕೋಟಿರೂ ಸಾಲ ವಿತರಿಸಲಾಗಿದೆ. ಮುಂದೆ 13 ಸಾವಿರ ಕುಟುಂಗಳಿಗೆ ಸಾಲ ಸೌಲಭ್ಯ ವಿಸ್ತರಿಸಲು ಮುಂದಾಗಿದ್ದೇವೆ ಎಂದರು.
2018ರಲ್ಲಿ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾದಾಗ ಕೇವಲ 337 ಕೋಟಿ ಠೇವಣಿಯನ್ನೀಗ ಕೇವಲ 4 ವರ್ಷಗಳಲ್ಲಿ 900ಕೋಟಿ ತಲುಪಿದೆ. ಒಂದು ಲಕ್ಷ ರೈತ ಕುಟುಂಬಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, 1100 ಕೋಟಿಯಿಂದ 2100 ಕೋಟಿವರೆಗೆ ವ್ಯವಹಾರ ನಡೆಸಿರುವ ಹೆಮ್ಮೆ ಇದೆ. ಮಹಿಳಾ ಸ್ವಸಹಾಯ ಸಂಘಗಳಿಗೆ 17 ಕೋಟಿರೂ ಸಾಲ ನೀಡಲಾಗಿದೆ. ಸೊಸೈಟಿಗಳಿಗೆ ಹಿಂದೆ 50 ಸಾವಿರ ಅನುದಾನ ನೀಡಲಾಗುತ್ತಿತ್ತು. ಇದೀಗ 5ಲಕ್ಷಕ್ಕೇರಿಸಲಾಗಿದೆ. ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕಿನಿಂದ ತಾಲೂಕಿಗೆ 90 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಶಾಸಕ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ಸಹಕಾರಿ ಪಿತಾಮಹ ಸಿದ್ದನಗೌಡ ಸಣರಾಮನಗೌಡ ಪಾಟೀಲ್, ವರ್ಗೀಸ್ ಕುರಿಯನ್‍ರಿಂದ ಹಿಡಿದು ಕರ್ನಾಟಕದವರೇ ಆದ ಎಂ.ವಿ. ಕೃಷ್ಣಪ್ಪ ಹೀಗೆ ಹಲವಾರು ಮುಖಂಡರು ಸಹಕಾರ ಚಳವಳಿಯ ಬಲವರ್ಧನೆಗೆ ಪ್ರೋತ್ಸಾಹ ನೀಡಿದ್ದಾರೆ. ರಾಜ್ಯದಲ್ಲಿ 46ಸಾವಿರಕ್ಕೂ ಅಧಿಕ ಸಹಕಾರ ಸಂಘಗಳಿದ್ದು, 4ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಸಲಾಗಿದೆ.
ದುಡಿಯುವ ಬಂಡವಾಳ 11 ಲಕ್ಷ ಕೋಟಿರೂ.ಗಳಿಗೂ ಅಧಿಕವಾಗಿದ್ದು, 6ಲಕ್ಷ ಕೋಟಿ ರೂ.ಗೂ ಅಧಿಕ ಠೇವಣಿಗಳನ್ನು ಹೊಂದುವುದರ ಮೂಲಕ ವಿಶ್ವದ ಗಮನ ಸೆಳೆದಿದೆ.
ಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಮೈಮುಲ್ ಅಧ್ಯಕ್ಷ ಪ್ರಸನ್ನ, ನಿರ್ದೇಶಕ ಕೆ.ಎಸ್.ಕುಮಾರ್ ನೇತೃತ್ವದ ತಂಡವು ಎರಡೂ ಜಿಲ್ಲೆಗಳ ರೈತರಿಗೆ, ಹೈನುಗಾರರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆಂದು ಶ್ಲಾಘಿಸಿ,ಹುಣಸೂರಿನ ರೈತರಿಗೆ ತಿಂಗಳಿಗೆ 14ಕೋಟಿರೂ ಸಿಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಹಾಲಿಗೆ 5 ರೂ. ಪ್ರೋತ್ಸಾಹ ಧನ : ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಜಿ.ಟಿ.ದೇವೇಗೌಡರು ಸಹ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳನ್ನು ಬೆಳೆಸಿದ್ದರೆ, ಜಿಲ್ಲೆಯಲ್ಲಿ ಮುಚ್ಚಿ ಹೋಗುವ ಹಂತದಲ್ಲಿದ್ದ ಎಂಸಿಡಿಸಿಸಿ ಬ್ಯಾಂಕ್ ಮುನ್ನಡೆಸುವಲ್ಲಿ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡರು ಹಾಗೂ ಮೈಮುಲ್‍ನ ಪ್ರಗತಿಯಲ್ಲಿ ಕುಮಾರ್, ಪ್ರಸನ್ನ ನೇತೃತ್ವದ ತಂಡವು ಹೈನುಗಾರರ ಅಭ್ಯುದಯಕ್ಕೆ ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ಒಂದೇ ಕಾರ್ಯಕ್ರಮದಲ್ಲಿ ಸಹಕಾರಿಗಳನ್ನು ಸೇರಿಸಿರುವುದು ಅಭಿನಂದನೀಯ, ಹುಣಸೂರು ತಾಲೂಕಿನಲ್ಲಿ ಡೇರಿ ಮತ್ತು ಸೊಸೈಟಿಗಳು ಉತ್ತಮವಾಗಿ ನಡೆಯುತ್ತಿವೆ. ಇದಕ್ಕೆ ಜಿ.ಟಿ.ದೇವೇಗೌಡರು, ಹರೀಶ್‍ಗೌಡ, ಪ್ರಸನ್ನರವರು ಕಾರಣವಾಗಿದ್ದು, ಸಹಕಾರ ಕ್ಷತ್ರದಲ್ಲಿ ಪಕ್ಷ-ಜÁತಿ ಭೇಧ ಮರೆತು ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
ಮೈಮುಲ್ ನಿರ್ದೇಶಕ ಕೆ.ಎಸ್. ಕುಮಾರ್, ನಿರ್ದೇಶಕಿ ಶಿವಗಾಮಿ, ಎಂಸಿಡಿಸಿಸಿ ನಿರ್ದೇಶಕ ಎಂ.ಡಿ. ವಿಜಯ್ ಕುಮಾರ್, ಸಿಇಒ ಜನಾರ್ಧನ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.