ಬೆಂಗಳೂರು,ಆ.24- ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಾಂಸಾಹಾರ ಸಂಬಂಧಪಟ್ಟಂತೆ ವಿವಾದ ಸೃಷ್ಟಿಸಲು ಮುಂದಾಗಿದ್ದ ಬಿಜೆಪಿ ಕೊನೆಗೆ ತಾನೇ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಕಾಂಗ್ರೆಸ್ ನಾಯಕರು ಈವರೆಗೂ ಭಾವನಾತ್ಮಕ ವಿಷಯಗಳು ಬಂದಾಗ ಹಿಂಜರಿಕೆಯಿಂದಲೇ ಪ್ರತಿಕ್ರಿಯಿಸುತ್ತಿ ದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಕ್ತವಾದ ಬೆಂಬಲದಿಂದ ಉತ್ತೇಜನಗೊಂಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಪ್ರತಿ ವಾಗ್ದಾಳಿಗೆ ಮುಂದಾಗಿದೆ.
ಮಾಂಸಹಾರಿಗಳು ಬಹುಸಂಖ್ಯಾತ ರಾಗಿದ್ದು, ಬಿಜೆಪಿಗೆ ತಾಕತ್ತಿದ್ದರೆ ಮಾಂಸಹಾರಿಗಳ ಮತ ಬೇಡ ಎಂದು ಹೇಳಲಿ ಎಂಬ ತಿರುಗೇಟು ನೀಡಿದೆ. ವಿವಾದ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಬಿಜೆಪಿ ವಿಷಯಾಂತರಕ್ಕೆ ಮುಂದಾಗಿದೆ. ಈ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಮೀನು ಸೇವಿಸಿ ಹೋಗಿದ್ದರು ಎಂಬುದನ್ನು ದೊಡ್ಡ ವಿವಾದ ಮಾಡಲಾಗಿತ್ತು. ಆ ವೇಳೆ ಕಾಂಗ್ರೆಸ್‍ಗೆ ಮುಜುಗರವೂ ಆಗಿತ್ತು.
ಆ.18ರಂದು ಕೊಡುಗು ಪ್ರವಾಸದ ವೇಳೆ ಸಿದ್ದರಾಮಯ್ಯ ಅವರು ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾರೆ ಎಂಬ ವಿವಾದ ಮುಂದಿಟ್ಟುಕೊಂಡು ಬಿಜೆಪಿ ಮತ್ತೊಮ್ಮೆ ವಾಗ್ದಾಳಿಗೆ ತಯಾರಾಗಿತ್ತು. ಆದರೆ ಅದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಮಾಂಸಹಾರಿಗಳ ಮತವನ್ನು ಬಿಜೆಪಿ ನಿರಾಕರಿಸಲಿದೆಯೇ ಎಂಬ ಪ್ರಶ್ನೆ ಮುಂದಿಟ್ಟು ತಿರುಗೇಟು ನೀಡಿದೆ.
ಹೀಗಾಗಿ ಈಗ ಬೇರೆ ಬೇರೆ ವಿಷಯ ಗಳತ್ತ ಬಿಜೆಪಿ ಗಮನಹರಿಸಿದೆ. ಕಾಂಗ್ರೆಸ್ ನಾಯಕರು ಕೂಡ ಸಿಕ್ಕ ಸಿಕ್ಕಲೆಲ್ಲ ಪ್ರತಿದಾಳಿಯ ಮೂಲಕ ತರಾಟೆಗೆ ತೆಗೆದುಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕೆಲವು ಹಿಂದೂಪರ ಸಂಘಟನೆಗಳ ಪ್ರಮುಖರೂ ದನಿಗೂಡಿಸಿರುವುದು ಕಾಂಗ್ರೆಸ್‍ನ ಬಲವನ್ನು ಹೆಚ್ಚುವಂತೆ ಮಾಡಿದೆ.