ವೈದ್ಯಕೀಯ ವಿವಿಯ ಸಿಬ್ಬಂದಿಗೆ ದಿನಕ್ಕೆ 3 ಬಾರಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

Social Share

ಬೆಂಗಳೂರು,ಫೆ.3- ರಾಜ್ಯದ ಪ್ರತಿಯೊಂದು ವೈದ್ಯಕೀಯ ಮಹಾವಿದ್ಯಾಲಯ, ಕಾಲೇಜು ಮತ್ತು ಸಂಸ್ಥೆಗಳಲ್ಲಿ ಒಂದು ದಿನಕ್ಕೆ ಮೂರು ಬಾರಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯೇ ಇರುವುದಿಲ್ಲ. ತಮ್ಮ ಕೆಲಸದ ಅವಧಿಯಲ್ಲಿ ಬೇರೆ ಕಡೆಗೆ ಹೋಗಿ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವೈದ್ಯಕೀಯ ಮಹಾವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರುಗಳು ಬಯೋಮೆಟ್ರಿಕ್ ಹಾಜರಾತಿಯನ್ನು ಪಾಲಿಸುವ ಕುರಿತು ಆದೇಶಿಸಲಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಒಂದು ದಿನದಲ್ಲಿ ಮೂರು ಬಾರಿ ಬಯೋಮೆಟ್ರಿಕ್ ಹಾಜರಾತಿ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಬೆಳಗ್ಗೆ ಕೆಲಸ ಆರಂಭಿಸುವ ವೇಳೆಯಲ್ಲಿ ಮೊದಲ ಬಯೋಮೆಟ್ರಿಕ್ ಹಾಜರಾತಿ, ಮಧ್ಯಾಹ್ನ ಊಟದ ವಿರಾಮದ ನಂತರದಲ್ಲಿ ಎರಡನೇ ಬಯೋಮೆಟ್ರಿಕ್ ಹಾಜರಾತಿ ಹಾಗೂ ಸಂಜೆ ದಿನದ ಕರ್ತವ್ಯದ ಅವಧಿ ಅಂತ್ಯದ ವೇಳೆಯಲ್ಲಿ ಮೂರನೇ ಬಯೋಮೆಟ್ರಿಕ್ ಹಾಜರಾತಿಯನ್ನು ಹಾಕುವುದು ಕಡ್ಡಾಯವಾಗಿದೆ.
ರಾಜ್ಯದ ಕೆಲವು ಜಿಲ್ಲಾಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು ಸರಿಯಾಗಿ ಸೇವೆ ಸಲ್ಲಿಸುತ್ತಿಲ್ಲ. ಬೆಳಗ್ಗೆ ಆಸ್ಪತ್ರೆಗೆ ಆಗಮಿಸುವ ವೈದ್ಯರು ಹಾಜರಾತಿಗೆ ಸಹಿ ಮಾಡಿ ಒಂದು ಗಂಟೆಯಷ್ಟೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಅನಂತರದಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ತಮ್ಮ ಕಾರ್ಯ ನಿರ್ವಹಿಸುತ್ತಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸಿದ್ದರು.
ಹುಬ್ಬಳ್ಳಿಯಲ್ಲಿ ಈ ಬಗ್ಗೆ ಸ್ವತಃ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಗಮನಕ್ಕೆ ತಂದಿದ್ದರು.

Articles You Might Like

Share This Article