ಮುಂಬೈ, ಜ.26- ಮೆಗಾಸ್ಟಾರ್ ಚಿರಂಜೀವಿ ಅವರು ತಮಗೆ ಕೋವಿಡ್-19 ಪಾಸಿಟಿವ್ ಬಂದಿದ್ದು ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವುದಾಗಿ ಇಂದು ತಿಳಿಸಿದ್ದಾರೆ. ಕೋವಿಡ್-19 ಸೋಂಕು ದೃಢವಾದ ಬಳಿಕ ತಮಗೆ ಲಘು ಕಾಯಿಲೆ ಲಕ್ಷಣಗಳು ಕಂಡುಬಂದಿವೆ ಎಂದು ಅವರು ಟ್ವಿಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಪ್ರಿಯರೇ, ಎಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಂಡರೂ ಕಳೆದ ರಾತ್ರಿ ನನಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಮತ್ತು ನಾನು ಮನೆಯಲ್ಲೇ ಕ್ವಾರಂಟೈನ್‍ನಲ್ಲಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕಕ್ಕೆ ಬಂದವರು ಕೂಡ ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡುತ್ತೇನೆ. ಶೀಘ್ರದಲ್ಲೇ ನಿಮ್ಮೆಲ್ಲರನ್ನು ಭೇಟಿಯಾಗಲು ಕಾಯುತ್ತಿದ್ದೇನೆ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ಹೈದರಾಬಾದ್ ಮೂಲದ ಖ್ಯಾತ ನಟ ಚಿರಂಜೀವಿ ಅವರು ಹೊಸ ಚಿತ್ರ ಆಚಾರ್ಯರ ಬಿಡುಗಡೆಗೆ ಸಿದ್ಧರಾಗುತ್ತಿದ್ದರು. ಆದರೆ ದೇಶದಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈಗ ಆಚಾರ್ಯ ಫೆಬ್ರವರಿ 4ರಂದು ಬಿಡುಗಡೆಯಾಗುವ ನಿರೀಕ್ಷೆ ಇದೆ.
